ಭಾರತಕ್ಕೆ ಬರಲು ನಿರಾಕರಿಸಿದ ಹಿನ್ನೆಲೆ ಉಂಟಾದ ಉದ್ವಿಗ್ನತೆಯ ನಡುವೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೆ ಪತ್ರ ಬರೆದು ಸಂಬಂಧ ಸುಧಾರಣೆಗೆ ಮುಂದಾಗಿದೆ.
ಕಳೆದ ತಿಂಗಳು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಟಿ20 ವಿಶ್ವಕಪ್ 2026ಗಾಗಿ ಭಾರತಕ್ಕೆ ಬರುವುದನ್ನು ಬಾಂಗ್ಲಾದೇಶ ನಿರಾಕರಿಸಿತ್ತು. ಈ ಘಟನೆ ಎರಡೂ ದೇಶಗಳ ಕ್ರಿಕೆಟ್ ಸಂಬಂಧಗಳಲ್ಲಿ ಬಿರುಕು ಮೂಡಿಸಿತ್ತು. ಆದರೆ ಹೊಸ ಪ್ರಧಾನಮಂತ್ರಿ ತಾರಿಕ್ ರಹ್ಮಾನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಸುಧಾರಣೆಯ ದಿಕ್ಕಿನಲ್ಲಿ ಸಾಗುತ್ತಿದೆ.

ದೈನಿಕ್ ಜಾಗರಣ್ ವರದಿ ಪ್ರಕಾರ, BCB ತನ್ನ ಪತ್ರದಲ್ಲಿ ಎರಡೂ ಮಂಡಳಿಗಳ ನಡುವಿನ ದೀರ್ಘಕಾಲದ ಸ್ನೇಹಪೂರ್ಣ ಸಂಬಂಧವನ್ನು ಉಲ್ಲೇಖಿಸಿ, ಆಗಸ್ಟ್ 2025ಕ್ಕೆ ನಿಗದಿಯಾಗಿದ್ದ ಭಾರತದ ಬಾಂಗ್ಲಾದೇಶ ಪ್ರವಾಸವನ್ನು ಮರುಪರಿಶೀಲಿಸಲು BCCIಗೆ ಮನವಿ ಮಾಡಿದೆ. ಈ ಸರಣಿಯನ್ನು ನಂತರ ಸೆಪ್ಟೆಂಬರ್ 2026ಕ್ಕೆ ಮುಂದೂಡಲಾಗಿತ್ತು.
ಇದನ್ನೂ ಓದಿ: IPL: ಫಲಿಸದ ಆಯುಷ್ ಮಿಂಚಿನ ಆಟ, ರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಪಂಜಾಬ್

ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ನಡೆಯಬೇಕಿದ್ದು, ಭಾರತ ಭಾಗವಹಿಸದಿದ್ದರೆ ಟೂರ್ನಿ ದುಬೈ ಅಥವಾ ಶ್ರೀಲಂಕಾಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಇದರಿಂದ ಬಾಂಗ್ಲಾದೇಶಕ್ಕೆ ಆರ್ಥಿಕ ನಷ್ಟ ಉಂಟಾಗುವ ಆತಂಕವೂ ವ್ಯಕ್ತವಾಗಿದೆ.
ಇದರ ನಡುವೆ, ಐಪಿಎಲ್ ಹರಾಜಿನಲ್ಲಿ 9.20 ಕೋಟಿ ಪಡೆದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದ ಮುಸ್ತಫಿಜುರ್ ರಹ್ಮಾನ್ ಅವರನ್ನು ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಸಿಸಿಐ ನಿರ್ದೇಶನದ ಮೇರೆಗೆ ಐಪಿಎಲ್‌ನಿಂದ ಹೊರಗಿಡಲಾಗಿತ್ತು. ಈ ಬೆಳವಣಿಗೆಯ ಬಳಿಕ, ಬಾಂಗ್ಲಾದೇಶ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು ಐಸಿಸಿಗೆ ಮನವಿ ಮಾಡಿತ್ತು. ಆದರೆ ಐಸಿಸಿ ಈ ಬೇಡಿಕೆಯನ್ನು ತಿರಸ್ಕರಿಸಿ, ಬಾಂಗ್ಲಾದೇಶದ ಬದಲು ಸ್ಕಾಟ್ಲೆಂಡ್ ತಂಡವನ್ನು ಸೇರಿಸಿತ್ತು. ಪ್ರಸ್ತುತ ಮುಸ್ತಫಿಜುರ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದಾರೆ.

ಇದಕ್ಕೂ ಮೊದಲು, 2025ರ ಜುಲೈ 5ರಂದು BCCI ಮತ್ತು BCB ಪರಸ್ಪರ ಒಪ್ಪಂದದಂತೆ ಆಗಸ್ಟ್ 2025ರಲ್ಲಿ ನಡೆಯಬೇಕಿದ್ದ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಯನ್ನು ಸೆಪ್ಟೆಂಬರ್ 2026ಕ್ಕೆ ಮುಂದೂಡಿದ್ದರು.
ಕೊನೆಯ ಬಾರಿ 2024ರಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಸರಣಿ ನಡೆದಿದ್ದು, ಆ ವೇಳೆ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. 2027ರ ಏಷ್ಯಾ ಕಪ್ ಬಾಂಗ್ಲಾದೇಶದಲ್ಲಿ ನಡೆಯುವ ಸಾಧ್ಯತೆ ಇದ್ದು, ಅದಕ್ಕೆ ಸಂಬಂಧಿಸಿದ ವೇಳಾಪಟ್ಟಿ ಇನ್ನೂ ಅಂತಿಮವಾಗಿಲ್ಲ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

