IPL: ಎಸ್‌ಆರ್‌ಹೆಚ್ ಅದ್ದೂರಿ ಬ್ಯಾಟಿಂಗ್, ಆರ್‌ಸಿಬಿಗೆ ಹೀನಾಯ ಸೋಲು

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 56 ರನ್‌ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, ನಿರ್ದಿಷ್ಟ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬೃಹತ್ 255 ರನ್ ಕಲೆಹಾಕಿತು.

ಹೈದರಾಬಾದ್ ಪರ ಆರಂಭಿಕರಿಂದಲೇ ಸ್ಫೋಟಕ ಆಟ ಕಂಡುಬಂತು. ಇಶಾನ್ ಕಿಶನ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ 79 ರನ್ ಸಿಡಿಸಿದರೆ, ಅಭಿಷೇಕ್ ಶರ್ಮಾ 56 ರನ್ ಗಳಿಸಿದರು. ಟ್ರಾವಿಸ್ ಹೆಡ್ 26 ರನ್ ಕೊಡುಗೆ ನೀಡಿದರು.

ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಕೇವಲ ಕೆಲವೇ ಎಸೆತಗಳಲ್ಲಿ 51 ರನ್ ಚಚ್ಚಿ ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ಅಂತಿಮ ಹಂತದಲ್ಲಿ ನಿತಿಶ್ ಕುಮಾರ್ ರೆಡ್ಡಿ ಅಜೇಯ 29 ರನ್ ಗಳಿಸಿ ಮಿಂಚಿದರು.

ಆರ್‌ಸಿಬಿ ಪರ ರಸಿಖ್ ಸಲಾಮ್ 2 ವಿಕೆಟ್ ಪಡೆದರೆ, ಸುಯಶ್ ಶರ್ಮಾ ಹಾಗೂ ಕೃನಾಲ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: IPL: ಸಾಯಿ ಸುದರ್ಶನ್ ಅಬ್ಬರ, ಗುಜರಾತ್ ಬೌಲರ್ಸ್ ಕಮಾಲ್; ಚೆನ್ನೈಗೆ ಸೋಲು

ಬೃಹತ್ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ವಿರಾಟ್ ಕೊಹ್ಲಿ 15 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ದೇವದತ್ ಪಡಿಕ್ಕಲ್ 21 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ವೆಂಕಟೇಶ್ ಅಯ್ಯರ್ 44 ರನ್ ಹಾಗೂ ರಜತ್ ಪಾಟಿದಾರ್ 56 ರನ್ ಗಳಿಸಿ ಹೋರಾಟ ನಡೆಸಿದರು.

ಅಂತಿಮ ಹಂತದಲ್ಲಿ ಕೃನಾಲ್ ಪಾಂಡ್ಯ ಅಜೇಯ 41 ಮತ್ತು ಟಿಮ್ ಡೇವಿಡ್ ಅಜೇಯ 15 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ನಿರ್ದಿಷ್ಟ 20 ಓವರ್‌ಗಳಲ್ಲಿ ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಹೈದರಾಬಾದ್ ತಂಡವು 56 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಹೈದರಾಬಾದ್ ಪರ ಈಶಾನ್ ಮಲಿಂಗ 2 ವಿಕೆಟ್ ಪಡೆದರೆ, ಸಾಕಿಬ್ ಹುಸೈನ್ ಹಾಗೂ ಟ್ರಾವಿಸ್ ಹೆಡ್ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ