ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ ನಡೆದಿದ್ದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ (RSS) ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆಗೆ ನೋಟಿಸ್ ಜಾರಿ ಮಾಡಿದ್ದಾರೆ. ರಹಿಮಾನ್ ಹತ್ಯೆಯ ಸಮಯದಲ್ಲಿ ಆರೋಪಿಗಳ ಜೊತೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಫೋನ್ ಸಂಪರ್ಕದಲ್ಲಿದ್ದರು ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ತನಿಖಾಧಿಕಾರಿ ಕಲೈಮಾರ್ ಪಿ. ಅವರು ಈ ನೋಟಿಸ್ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಸತ್ಯಾಂಶಗಳು ಹಾಗೂ ಸನ್ನಿವೇಶಗಳನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ಕಡ್ಡಾಯವಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಕಲ್ಲಡ್ಕದಲ್ಲಿರುವ ತಮ್ಮ ನಿವಾಸದಲ್ಲೇ ಇದ್ದು, ನಾಳೆ ತನಿಖಾಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವಂತೆ ಪ್ರಭಾಕರ್ ಭಟ್ ಅವರಿಗೆ ಸೂಚಿಸಲಾಗಿದೆ.
2025ರ ಮೇ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನಲ್ಲಿ ಅಬ್ದುಲ್ ರಹಿಮಾನ್ ಎಂಬುವವರನ್ನು ಕಠೋರವಾಗಿ ಹತ್ಯೆ ಮಾಡಲಾಗಿತ್ತು. ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಇದುವರೆಗೆ 23 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ (ದೋಷಾರೋಪಣೆ ಪಟ್ಟಿ) ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಆರೋಪಿಗಳ ವಿರುದ್ಧ ಕಠಿಣ ‘ಕೋಕಾ’ (KOCA) ಕಾಯಿದೆಯನ್ನೂ ಜಾರಿಗೊಳಿಸಲಾಗಿತ್ತು.
ಇದನ್ನು ಓದಿ: ಸೌಜನ್ಯ ಪ್ರಕರಣ ಮರುತನಿಖೆ: ‘ಸರ್ಕಾರ ರಚಿಸಿರುವ SIT ತಂಡದ ಬಗ್ಗೆ ಅಸಮಾಧಾನವಿದೆ’: ಸೌಜನ್ಯ ತಾಯಿ ಕುಸುಮಾವತಿ
ಇತ್ತೀಚೆಗಷ್ಟೇ ಮೈಸೂರಿನ ಕೋಕಾ ನ್ಯಾಯಾಲಯವು ಈ ಪ್ರಕರಣದ 23 ಆರೋಪಿಗಳ ಪೈಕಿ ಎಂಟು ಜನರಿಗೆ ಜಾಮೀನು ಮಂಜೂರು ಮಾಡಿದೆ. ಪ್ರಕರಣ ನಡೆದ ಹಲವು ತಿಂಗಳ ಬಳಿಕ RSS ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸುತ್ತಿರುವುದು ಕರಾವಳಿ ಭಾಗದಲ್ಲಿ ತೀವ್ರ ಕುತೂಹಲ ಹಾಗೂ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

