ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ನಂದಿನಿ ಹಾಲಿನ ದರ ಲೀಟರ್‌ಗೆ 5 ರೂಪಾಯಿ ಹೆಚ್ಚಳ ಮಾಡಲು ಕರ್ನಾಟಕ ಹಾಲು ಮಹಾಮಂಡಳ (KMF) ತೀರ್ಮಾನಿಸಿದೆ. ಹಾಲಿನ ದರ ಹೆಚ್ಚಳದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಪರಿಷ್ಕೃತ ದರದ ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ. ಹಾಲು ಉತ್ಪಾದನೆ ಮತ್ತು ನಿರ್ವಹಣಾ ವೆಚ್ಚ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಒಕ್ಕೂಟವು ಹಾಲಿನ ಮಾರಾಟ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ನಿರಂತರ ಒತ್ತಡ ಹೇರುತ್ತಿತ್ತು.
ಆರಂಭದಲ್ಲಿ ಹಾಲು ಒಕ್ಕೂಟಗಳು ಲೀಟರ್‌ಗೆ 10 ರೂಪಾಯಿ ಹೆಚ್ಚಳ ಮಾಡುವಂತೆ ಪಟ್ಟು ಹಿಡಿದಿದ್ದವು. ಒಂದು ವೇಳೆ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ‘ವಿಧಾನಸೌಧ ಚಲೊ’ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದವು. ಹಾಲು ಒಕ್ಕೂಟಗಳ ಎಚ್ಚರಿಕೆ ಮತ್ತು ರೈತರ ಹಿತಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಈಗ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗದಂತೆ ಹಾಗೂ ರೈತರಿಗೆ ಸೂಕ್ತ ಲಾಭ ಸಿಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಲೀಟರ್‌ಗೆ 4 ರಿಂದ 5 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಪೊಲೀಸ್ ನೋಟಿಸ್
ಸಿಎಂ ಜೊತೆಗಿನ ಸಭೆಯ ನಂತರ ನಿರ್ಧಾರ:
ಇತ್ತೀಚೆಗಷ್ಟೇ ಹಾಲು ಒಕ್ಕೂಟಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ನಂದಿನಿ ಹಾಲಿನ ಸಂಗ್ರಹಣೆ ಹಾಗೂ ಮಾರಾಟ ದರವನ್ನು 8 ರಿಂದ 10 ರೂಪಾಯಿ ಹೆಚ್ಚಿಸುವಂತೆ ಮನವಿ ಸಲ್ಲಿಸಿತ್ತು. 16 ಜಿಲ್ಲೆಗಳನ್ನು ಪ್ರತಿನಿಧಿಸುವ ಹಾಲಿನ ಸಹಕಾರ ಒಕ್ಕೂಟಗಳ ಮನವಿಗೆ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ. ಸರ್ಕಾರದ ಅಧಿಕೃತ ಆದೇಶ ಹೊರಬಿದ್ದ ತಕ್ಷಣ ನಂದಿನಿ ಹಾಲಿನ ನೂತನ ದರ ಜಾರಿಗೆ ಬರಲಿದೆ.

