ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಗುರುಪೂರ್ಣಿಮೆ” ಆಚರಣೆ: ಜ್ಞಾನದ ಬೆಳಕು ಮೂಡಿಸುವವರೇ ಗುರು

ಕಲ್ಲಡ್ಕ: ಇಲ್ಲಿನ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ದಿನಾಂಕ 29 ಜುಲೈ 2026ರಂದು “ಗುರುಪೂರ್ಣಿಮೆ” ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ದೀಪಪ್ರಜ್ವಲನೆ ನೆರವೇರಿಸಿ, ಆಗಮಿಸಿದ ಅತಿಥಿ ಗಣ್ಯರಿಗೆ ಸಾಂಪ್ರದಾಯಿಕವಾಗಿ ತಾಂಬೂಲ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ನಂತರ ವಿದ್ಯಾರ್ಥಿನಿಯರಾದ ಭೂಮಿಕಾ, ಸಾನ್ವಿ ಸನಿಲ್ ಮತ್ತು ವಚನ ಅವರು ಪ್ರೇರಣಾ ಗೀತೆಯನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಗುರುಪೂರ್ಣಿಮೆಯ ಪವಿತ್ರ ಮಹತ್ವದ ಕುರಿತು ಮಾತನಾಡಿದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಪರ್ಕ ಪ್ರಮುಖ್ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಸುಜಿತ್ ಕೊಟ್ಟಾರಿ ಅವರು ” ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬಂತೆ, ಗುರುಗಳು ನಮ್ಮ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ಮೂಡಿಸುವವರು. ನಮ್ಮಲ್ಲಿರುವ ಸುಪ್ತ ಗುಣಗಳನ್ನು ಗುರುತಿಸಿ, ಸರಿಯಾದ ದಾರಿಯನ್ನು ತೋರುವ ಮಹಾನ್ ಶಕ್ತಿ ಗುರು. ಗುರುಗಳು ನೀಡಿದ ಸಂಸ್ಕಾರವೇ ನಿಜವಾದ ಗುರುದಕ್ಷಿಣೆ. ಗುರುಗಳ ಪ್ರೇರಣೆಯಿಂದ ಜೀವನದಲ್ಲಿ ಏನೆಲ್ಲಾ ಸಾಧಿಸಬಹುದು. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ, ತ್ಯಾಗ ಹಾಗೂ ಸಮರ್ಪಣಾ ಭಾವವನ್ನು ಬೆಳೆಸಿಕೊಳ್ಳಬೇಕು. ಹೆಚ್ಚಿನ ಪುಸ್ತಕಗಳನ್ನು ಹಾಗೂ ಪುರಾಣ ಕಥೆಗಳನ್ನು ಓದಿ, ಮಹರ್ಷಿ ವೇದವ್ಯಾಸರಂತಹ ದಿವ್ಯ ವ್ಯಕ್ತಿತ್ವ ಮತ್ತು ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಮಕ್ಕಳಿಗೆ ಹಾರೈಸಿದರು.

ಇದನ್ನೂ ಓದಿ: ಪೇಪರ್ ಲೀಕ್ ತಡೆಗೆ ಕೇಂದ್ರದಿಂದ ಕಠಿಣ ತಿದ್ದುಪಡಿ ಕಾಯ್ದೆ: ಜುಲೈ 27ಕ್ಕೆ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ವಿಧೇಯಕ-2026’ ಮಂಡನೆ

ವೇದಿಕೆಯಲ್ಲಿ ಸಜಿಪ ಪಡು ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೀತಾ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಮಾತೃಭಾರತಿ ಸದಸ್ಯೆ ಸಂಧ್ಯಾ ಕುದ್ರೆಬೆಟ್ಟು, ಶ್ರೀರಾಮ ವಿದ್ಯಾಕೇಂದ್ರದ ಸಹ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಮತ್ತು ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪ್ರಣಮ್ಯ ಸ್ವಾಗತಿಸಿದರು. ಅನಿಖಾ ಕೆ.ಸಿ. ಕಾರ್ಯಕ್ರಮ ನಿರೂಪಿಸಿ, ರೇಷ್ಮಾ ಪಿ.ಆರ್. ವಂದಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *