ಕೇವಲ ಮೊದಲ ಹೆಂಡತಿಯಷ್ಟೇ ಅಲ್ಲ!; ಮೃತರನ್ನು ನಂಬಿ ಬದುಕುತ್ತಿದ್ದ ಎರಡನೇ ಪತ್ನಿಗೂ ಇನ್ಮುಂದೆ ‘ಇನ್ಶೂರೆನ್ಸ್ ಕ್ಲೈಮ್’ ಪಡೆಯುವ ಹಕ್ಕಿದೆ ಎಂದ ಹೈಕೋರ್ಟ್

ಬೆಂಗಳೂರು: ಮೋಟಾರು ವಾಹನ ಅಪಘಾತದ ಪರಿಹಾರ ಕ್ಲೈಮ್‌ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದರೆ (ಆಶ್ರಿತರಾಗಿದ್ದರೆ), ಅಂತಹ ವ್ಯಕ್ತಿಯ ಎರಡನೇ ಪತ್ನಿ ಮತ್ತು ಆಕೆಯ ಮಗಳು ಸಹ ಅಪಘಾತದ ಪರಿಹಾರವನ್ನು ಪಡೆಯಲು ಕಾನೂನುಬದ್ಧವಾಗಿ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಮೋಟಾರು ವಾಹನ ಕಾಯ್ದೆಯಡಿ ಯಾರು ‘ಕಾನೂನು ವಾರಸುದಾರರು’ (Legal Representatives) ಎಂಬುದನ್ನು ನಿರ್ಧರಿಸಲು ಯಾವುದೇ ಕಟ್ಟುನಿಟ್ಟಾದ ಕಾನೂನು ಪರೀಕ್ಷೆ ಇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪರಿಹಾರ ಮೊತ್ತವನ್ನು 15 ಲಕ್ಷ ರೂ. ಹೆಚ್ಚಿಸಿದ ಹೈಕೋರ್ಟ್:

Advertisement

ಆಶಾ ಮತ್ತು ಇತರರು ವೀಸಸ್ ರಾಮಕೃಷ್ಣ ಎಸ್. ಘಾಟ್ಗೆ ಮತ್ತು ಇತರರು ಎಂಬ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ತಾರಾ ವಿಟಾಸ್ಟಾ ಗಂಜು ಅವರಿದ್ದ ಉನ್ನತ ಪೀಠವು ಈ ಆದೇಶ ಹೊರಡಿಸಿದೆ. ಮೃತ ವ್ಯಕ್ತಿಯ ಮೇಲೆ ಆತನ ಎರಡನೇ ಪತ್ನಿ ಮತ್ತು ಆ ಮದುವೆಯಿಂದ ಹುಟ್ಟಿದ ಅಪ್ರಾಪ್ತ ಮಗಳು ಆಶ್ರಿತರಾಗಿದ್ದರು ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಪೀಠವು, ಮೋಟಾರು ಅಪಘಾತ ದಾವೆಗಳ ಪರಿಹಾರ ನ್ಯಾಯಾಧೀಕರಣ (MACT) ಈ ಹಿಂದೆ ನೀಡಿದ್ದ ಪರಿಹಾರದ ಮೊತ್ತವನ್ನು ಬರೋಬ್ಬರಿ 15 ಲಕ್ಷ ರೂಪಾಯಿಗಳಷ್ಟು ಹೆಚ್ಚಳ (Enhance) ಮಾಡಿದೆ.

ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; ವಕೀಲರನ್ನು ಆರೋಪಿಗಳನ್ನಾಗಿ ಮಾಡುವ ಪ್ರವೃತ್ತಿಗೆ ಬೇಸರ

ಕಾನೂನು ವಾರಸುದಾರರ’ ವ್ಯಾಪ್ತಿ ವಿಸ್ತರಿಸಿದ ನ್ಯಾಯಪೀಠ:

ವಿಚಾರಣೆ ವೇಳೆ ಕಾನೂನಿನ ವ್ಯಾಪ್ತಿಯನ್ನು ವಿಸ್ತರಿಸಿದ ಹೈಕೋರ್ಟ್ ಪೀಠವು, “ಮೃತ ವ್ಯಕ್ತಿಯ ಕಾನೂನು ವಾರಸುದಾರರು ಎಂದರೆ ಅದು ಕೇವಲ ಮೊದಲ ಪತ್ನಿ, ಪತಿ, ಪೋಷಕರು ಅಥವಾ ಮಕ್ಕಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಮೃತಪಟ್ಟ ವ್ಯಕ್ತಿಯ ಮೇಲೆ ತಾನು ಆರ್ಥಿಕವಾಗಿ ಆಶ್ರಿತನಾಗಿದ್ದೆ ಮತ್ತು ಆತನ ಮರಣದಿಂದಾಗಿ ತನಗೆ ಜೀವನ ನಡೆಸಲು ಕಷ್ಟವಾಗಿದೆ ಅಥವಾ ನಷ್ಟ ಉಂಟಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ವ್ಯಕ್ತಿಯೂ ಸಹ ಕಾನೂನುಬದ್ಧವಾಗಿ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ” ಎಂದು ಸ್ಪಷ್ಟಪಡಿಸಿದೆ.

ಹೈಕೋರ್ಟ್‌ನ ಈ ಕ್ರಾಂತಿಕಾರಿ ತೀರ್ಪು ಮುಂದಿನ ದಿನಗಳಲ್ಲಿ ಅಪಘಾತ ಪರಿಹಾರದ ದಾವೆಗಳಲ್ಲಿ ಆಶ್ರಿತರಾಗಿರುವ ಎರಡನೇ ಪತ್ನಿ ಹಾಗೂ ಮಕ್ಕಳಿಗೆ ದೊಡ್ಡ ಮಟ್ಟದ ಕಾನೂನು ರಕ್ಷಣೆಯನ್ನು ನೀಡಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *