ಬೆಂಗಳೂರು: ಗುಂಪು ಹತ್ಯೆ (Mob Lynching) ಮತ್ತು ಗುಂಪು ಹಿಂಸಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಅಥವಾ ಅವರ ಕುಟುಂಬದವರಿಗೆ ಮಧ್ಯಂತರ ಪರಿಹಾರ (Interim Compensation) ಒದಗಿಸಲು ಮುಂದಿನ 3 ತಿಂಗಳೊಳಗೆ ಸೂಕ್ತ ಯೋಜನೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್‌ನ ‘ತಹ್ಸೀನ್ ಎಸ್. ಪೂನಾವಾಲಾ’ ಪ್ರಕರಣದ ಮಾರ್ಗದರ್ಶನ ಸೂತ್ರಗಳನ್ನು ಪುನರುಚ್ಚರಿಸಿರುವ ನ್ಯಾಯಮೂರ್ತಿ ವಿಜಯ್‌ಕುಮಾರ್ ಎ. ಪಾಟೀಲ್ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ.
2025ರ ಏಪ್ರಿಲ್ 27ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಪರ ಘೋಷಣೆ ಕೂಗಿದರೆಂಬ ಆರೋಪದ ಮೇಲೆ ಅಶ್ರಫ್ ಎಂಬ ವ್ಯಕ್ತಿಯ ಮೇಲೆ ಗುಂಪು ದಾಳಿ ನಡೆದು ಆತ ಮೃತಪಟ್ಟಿದ್ದ.
ಪ್ರಕರಣದ ಪ್ರಮುಖ ಆರೋಪಿ ಸಚಿನ್ ಹಾಗೂ ಇತರರಿಗೆ ಮಂಗಳೂರಿನ ವಿಚಾರಣಾ ನ್ಯಾಯಾಲಯ (Trial Court) ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತ ಅಶ್ರಫ್ ಅವರ ಕುಟುಂಬಸ್ಥರು ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಆರೋಪಿಗಳಿಗೆ ಚಾರ್ಜ್‌ಶೀಟ್ (ಸಾಕ್ಷ್ಯಾಧಾರ) ಈಗಾಗಲೇ ಸಲ್ಲಿಕೆಯಾಗಿದ್ದು, ಕಸ್ಟಡಿ ವಿಚಾರಣೆ ಅಗತ್ಯವಿಲ್ಲದ ಕಾರಣ ಹೈಕೋರ್ಟ್ ಜಾಮೀನು ರದ್ದುಗೊಳಿಸಲು ನಿರಾಕರಿಸಿದೆ.
ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್ ನಿಯಮಾವಳಿಗಳನ್ನು ಉಲ್ಲೇಖಿಸಿ, ಗುಂಪು ದಾಳಿ ಪ್ರಕರಣಗಳಲ್ಲಿ ಆರೋಪಿಗಳ ಜಾಮೀನು ಅಥವಾ ಪೆರೋಲ್ ವಿಚಾರಣೆಯ ಸಮಯದಲ್ಲಿ ಸಂತ್ರಸ್ತರ ಕುಟುಂಬಸ್ಥರಿಗೆ (Next of Kin) ಮುಂಚಿತವಾಗಿ ನೋಟಿಸ್ ನೀಡುವುದು ಕಡ್ಡಾಯ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ನೋಟಿಸ್ ನೀಡಿಲ್ಲ ಎಂದು ವಾದಿಸಿದ್ದರು.
ಇದನ್ನೂ ಓದಿ: ವಿದೇಶಿಗರ ಮೇಲಿನ ಸಣ್ಣಪುಟ್ಟ ಕ್ರಿಮಿನಲ್ ಕೇಸ್ಗಳು ವಾಪಸಾತಿ: 365 ವಿದೇಶಿಯರ ಡಿಪೋರ್ಟ್‌ಗೆ ಪ್ರಾಸಿಕ್ಯೂಷನ್ ಇಲಾಖೆ ಚಾಲನೆ
ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯವು ಸಂತ್ರಸ್ತರ ಕುಟುಂಬಕ್ಕೆ ನೋಟಿಸ್ ನೀಡದೆ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೆ ಗಂಭೀರ ಲೋಪ ಎಸಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಂತ್ರಸ್ತರಿಗೆ ಮಧ್ಯಂತರ ನಷ್ಟ ಪರಿಹಾರ ನೀಡುವಂತಹ ಯಾವುದೇ ಯೋಜನೆಯನ್ನು ರಾಜ್ಯ ಸರ್ಕಾರ ഇതുವರೆಗೆ ಜಾರಿಗೆ ತರದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, 3 ತಿಂಗಳ ಒಳಗಾಗಿ ಈ ಯೋಜನೆಯನ್ನು ಸಿದ್ಧಪಡಿಸುವಂತೆ ಸರ್ಕಾರಕ್ಕೆ ಗಡುವು ನೀಡಿದೆ.

