ಬೆಂಗಳೂರು: ವಿದ್ಯುತ್ ಕೈಕೊಟ್ಟಾಗ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳು ಬಂದ್ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಚಾಟಿ ಬೀಸಿದೆ. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಮತ್ತು ಬ್ಯಾಕಪ್ ಪವರ್ (UPS) ವ್ಯವಸ್ಥೆಯ ಬಗ್ಗೆ ಸಮಗ್ರ ‘ತಾಂತ್ರಿಕ ಆಡಿಟ್’ (Technical Audit) ನಡೆಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಷ್ಟೇ ಅಲ್ಲದೆ, ಪ್ರತಿಯೊಂದು ಠಾಣೆಯ ಸಿಸಿಟಿವಿ ಕಾರ್ಯನಿರ್ವಹಣೆಯನ್ನು ರಿಯಲ್-ಟೈಮ್ನಲ್ಲಿ (Real-time) ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ಐಟಿ ಡ್ಯಾಶ್ಬೋರ್ಡ್ ವ್ಯವಸ್ಥೆಯನ್ನು ರೂಪಿಸುವಂತೆ ಪೊಲೀಸ್ ಕಂಪ್ಯೂಟರ್ ವಿಭಾಗಕ್ಕೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಆದೇಶಿಸಿದೆ.
ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ಶೈಲಜಾ ಎಂಬುವವರು, ಠಾಣೆಯಲ್ಲಿ ಅಧಿಕಾರಿಗಳ ವರ್ತನೆ ಹೇಗಿತ್ತು ಎಂಬುದನ್ನು ಸಾಬೀತುಪಡಿಸಲು ಸಿಸಿಟಿವಿ ಫುಟೇಜ್ ಕೋರಿ ರಾಜ್ಯ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಮಾಹಿತಿ ಆಯೋಗ ಇದನ್ನು ನಿರಾಕರಿಸಿದ್ದರಿಂದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಾಲಯದ ವಿಚಾರಣೆ ವೇಳೆ, ಯುಪಿಎಸ್ (UPS) ಕೆಟ್ಟುಹೋಗಿದ್ದರಿಂದ ವಿದ್ಯುತ್ ಇಲ್ಲದ ಸಮಯದಲ್ಲಿ ಸಿಸಿಟಿವಿ ಫುಟೇಜ್ ಲಭ್ಯವಾಗಿಲ್ಲ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಸುಮಾರು 11 ತಿಂಗಳಿನಿಂದ ವೈಟ್ಫೀಲ್ಡ್ ಠಾಣೆಯಲ್ಲಿ ಯುಪಿಎಸ್ ವ್ಯವಸ್ಥೆ ಕೆಟ್ಟುಬಿದ್ದಿರುವುದು ಗೊತ್ತಾಗಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
“ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವುದು ಕೇವಲ ಹೆಸರಿಗಷ್ಟೇ ಅಲ್ಲ, ಅದು ಸುಪ್ರೀಂ ಕೋರ್ಟ್ ನೀಡಿದ ಕಡ್ಡಾಯ ನಿರ್ದೇಶನ. ಯುಪಿಎಸ್ ಕೆಟ್ಟಿದ್ದರೂ ಠಾಣಾಧಿಕಾರಿ (SHO) ಒಂದು ವರ್ಷದಿಂದ ಸುಮ್ಮನೆ ಕುಳಿತಿದ್ದದ್ದು ಹೇಗೆ?” ಎಂದು ನ್ಯಾಯಪೀಠ ಪ್ರಶ್ನಿಸಿತು. ಪ್ರಸ್ತುತ ರಾಜ್ಯದ ಯಾವುದೇ ಠಾಣೆಯಲ್ಲೂ ಯುಪಿಎಸ್ ಸಮಸ್ಯೆಯಿಲ್ಲ, 24/7 ಸಿಸಿಟಿವಿ ಕೆಲಸ ಮಾಡುತ್ತಿವೆ ಎಂಬ ಇಲಾಖೆಯ ಇತ್ತೀಚಿನ ವರದಿಯನ್ನು ಹೈಕೋರ್ಟ್ “ಖೇದಕರ” ಎಂದು ಕರೆದಿದೆ.
ಇದನ್ನು ಓದಿ: ಪುತ್ತೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ವಾಗ್ವಾದ, ಹಲ್ಲೆ: ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೂ ದೂರು ದಾಖಲು
ಸಮಗ್ರ ಆಡಿಟ್ನಲ್ಲಿ ಏನೆಲ್ಲಾ ಇರಲಿದೆ?
ಅಪರ ಮುಖ್ಯ ಕಾರ್ಯದರ್ಶಿ (ಒಳಡಳಿತ ಇಲಾಖೆ) ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG-IGP) ಸ್ವತಃ ಈ ಸಿಸಿಟಿವಿ ಹಾಗೂ ಯುಪಿಎಸ್ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು ಎಂದು ಕೋರ್ಟ್ ಹೇಳಿದೆ. ಈ ಆಡಿಟ್ನಲ್ಲಿ:
ಕ್ಯಾಮೆರಾಗಳ ಸಂಖ್ಯೆ, ಸ್ಥಳ ಮತ್ತು ಕೆಲಸ ಮಾಡುತ್ತಿರುವ ಸ್ಥಿತಿ.
ಯುಪಿಎಸ್ ಸಾಮರ್ಥ್ಯ (ಕೆಲವು ಠಾಣೆಗಳಲ್ಲಿ ಕೇವಲ 0.5 kVA ಇದ್ದರೆ, ಇನ್ನು ಕೆಲವು ಕಡೆ 600 kVA ವರೆಗೆ ವ್ಯತ್ಯಾಸವಿರುವುದನ್ನು ಕೋರ್ಟ್ ಗುರುತಿಸಿದೆ).
ಕರೆಂಟ್ ಹೋದಾಗ ಎಷ್ಟು ಗಂಟೆಗಳ ಕಾಲ ಯುಪಿಎಸ್ ಬ್ಯಾಕಪ್ ಸಿಗುತ್ತದೆ ಎಂಬ ನಿಖರ ಮಾಹಿತಿ.
ಫುಟೇಜ್ ಸಂಗ್ರಹಿಸಿಡುವ ಸಾಮರ್ಥ್ಯ ಹಾಗೂ ನಿಯಮಿತ ನಿರ್ವಹಣೆ .
ರಿಯಲ್-ಟೈಮ್ ಐಟಿ ಡ್ಯಾಶ್ಬೋರ್ಡ್
ಯಾವುದೇ ಠಾಣೆಯಲ್ಲಿ ಸಿಸಿಟಿವಿ ಅಥವಾ ಯುಪಿಎಸ್ ಆಫ್ ಆದರೆ ಅಥವಾ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣವೇ ಮೇಲಧಿಕಾರಿಗಳಿಗೆ ಆಟೋಮ್ಯಾಟಿಕ್ ಅಲರ್ಟ್ (Automatic Alert) ಹೋಗುವಂತಹ ಡಿಜಿಟಲ್ ಡ್ಯಾಶ್ಬೋರ್ಡ್ ನಿರ್ಮಿಸಲು ಹೈಕೋರ್ಟ್ ಸೂಚಿಸಿದೆ.
ಇನ್ನು 2024ರ ಸೆಪ್ಟೆಂಬರ್ 4 ರಂದು ಮಧ್ಯಾಹ್ನ 11 ರಿಂದ 2.30ರ ನಡುವೆ ವೈಟ್ಫೀಲ್ಡ್ ಠಾಣೆಯಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತೇ ಎಂಬುದನ್ನು ತಿಳಿಯಲು ಬೆಸ್ಕಾಂ (BESCOM) ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ.

