ಕಾಸರಗೋಡು: ಜಿಲ್ಲೆಯ ಕುಂಬಳೆ ಸಮೀಪದ ಶಾಂತಿಪಳ್ಳ ತಿರುವಿನಲ್ಲಿ ಬುಧವಾರ ಮಧ್ಯಾಹ್ನ ಖಾಸಗಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಟ್ಟು 12 ಮಂದಿ ಗಾಯಗೊಂಡಿದ್ದಾರೆ.ಕುಂಬಳೆಯಿಂದ ಬದಿಯಡ್ಕ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಕುಂಬಳೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಶಾಂತಿಪಳ್ಳದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ನಾಗರಿಕರು ಹರಸಾಹಸ ಪಟ್ಟು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಲಂಪಾಡಿ ನಿವಾಸಿಗಳಾದ ಮಾಲಿಕ್, ತಾಜುದ್ದೀನ್, ಕಬೀರ್ ಮತ್ತು ಸಿದಾನ್ ಗಾಯಗೊಂಡಿದ್ದಾರೆ. ಇವರಲ್ಲಿ ಸಿದಾನ್ ಎಂಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಸ್ಸಿನಲ್ಲಿದ್ದ ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ. ಮುಸ್ಕಾನ, ಕಂಚಿಕಟ್ಟೆಯ ಸುಜಾತ (40), ಮತ್ತು ಕುಂಜತ್ತೂರು ಶಾಲೆಯ ಶಿಕ್ಷಕಿ ದೀಪ್ತಿ (22) ಸೇರಿದ್ದಾರೆ.

ಇದನ್ನೂ ಓದಿ: ಒಬ್ಬಳೇ ವಧು, ಇಬ್ಬರು ವರರು! ಒಬ್ಬಳಿಗಾಗಿ ಎರಡು ರಾಜ್ಯದ ವ್ಯಕ್ತಿಗಳ ನಡುವೆ ಬಿಗ್ ಫೈಟ್
ಅಪಘಾತ ನಡೆದ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿರುವಿನಲ್ಲಿ ವೇಗವಾಗಿ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

