ಕಾಸರಗೋಡು: ಮಂಜೇಶ್ವರದ ಉಪ್ಪಳ ಸಮೀಪದ ಮದಂದೂರು ಜೋಡುಕಲ್ಲಿನ ಡೇರಂಬಳ ಎಂಬಲ್ಲಿ ಅಪಾಯಕಾರಿ ಅಡಿಕೆ ಮರದ ಪಾಲದ ಸೇತುವೆ ದಾಟುತ್ತಿದ್ದಾಗ ಕಾಲು ಜಾರಿ ನದಿಗೆ ಬಿದ್ದು ತಪಾಸಣೆಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನದಿಯ ಭೋರ್ಗರೇತದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವತಿಯನ್ನು ಸ್ಥಳೀಯ ಯುವಕನೊಬ್ಬ ತಕ್ಷಣ ನದಿಗೆ ಧುಮುಕಿ, ಪ್ರಾಣದ ಹದನವನ್ನೂ ಲೆಕ್ಕಿಸದೆ ಸಾಹಸಮಯವಾಗಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿನಿಯನ್ನು ನಿಷ್ಮಿತಾ ಎಂದು ಗುರುತಿಸಲಾಗಿದೆ.
ಸೋಮವಾರ ನಿಷ್ಮಿತಾ ಮತ್ತು ಆಕೆಯ ಸಹೋದರಿ ಸುಶ್ಮಿತಾ ಬಸ್‌ನಿಂದ ಇಳಿದು ಮೀಂಜ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ಡೇರಂಬಳ ಬಳಿ ಇರುವ ಕಿರಿದಾದ, ಅಡಿಕೆ ಮರಗಳಿಂದ ನಿರ್ಮಿಸಲಾದ ತಾತ್ಕಾಲಿಕ ಸೇತುವೆಯನ್ನು (ಪಾಲ) ಪರಸ್ಪರ ಕೈಹಿಡಿದುಕೊಂಡು ಜಾಗರೂಕತೆಯಿಂದ ದಾಟುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನಿಷ್ಮಿತಾ ಅವರ ಕಾಲು ಜಾರಿ, ಭೋರ್ಗರೆದು ಹರಿಯುತ್ತಿದ್ದ ನದಿಗೆ ಬಿದ್ದಿದ್ದಾರೆ.
ವಿದ್ಯಾರ್ಥಿನಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಸ್ಥಳೀಯ ನಿವಾಸಿ ಉದಯ ಕುಮಾರ್ ಶೆಟ್ಟಿ டேರಂಬಳ ತಕ್ಷಣವೇ ಸ್ಪಂದಿಸಿದರು. ತಮ್ಮ ಜೀವದ ಹದನವನ್ನು ಬದಿಗೊತ್ತಿ ನದಿಗೆ ಧುಮುಕಿದ ಅವರು, ನೀರಿನ ಪ್ರಬಲ ಹರಿವಿನ ವಿರುದ್ಧ ಹೋರಾಡಿ ನಿಷ್ಮಿತಾ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಉದಯ ಕುಮಾರ್ ಶೆಟ್ಟಿ ಅವರ ಸಮಯಪ್ರಜ್ಞೆ ಮತ್ತು ಸಮಯೋಚಿತ ಸಾಹಸದಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಬಿದ್ದ ರಭಸಕ್ಕೆ ಗಾಯಗೊಂಡ ನಿಷ್ಮಿತಾ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ: ವೈರಲ್ ರೋಗಗಳ ಭೀತಿ ನಡುವೆ ಆರೋಗ್ಯ ಸಚಿವರ ಅಭಯ
ಉದಯ ಕುಮಾರ್ ಶೆಟ್ಟಿ ಸಾಹಸಕ್ಕೆ ಜನಮೆಚ್ಚುಗೆ
ಆಪತ್ತಿನ ಸಮಯದಲ್ಲಿ ಪ್ರಾಣದ ಹಂಗು ತೊರೆದು ಯುವತಿಯ ಜೀವ ಉಳಿಸಿದ ಉದಯ ಕುಮಾರ್ ಶೆಟ್ಟಿ ಅವರ ಧೈರ್ಯ, ನಿಸ್ವಾರ್ಥತೆ ಹಾಗೂ ಮಾನವೀಯತೆಯನ್ನು ಸ್ಥಳೀಯರು ಮತ್ತು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಘಟನೆಯು ಡೇರಂಬಳದಲ್ಲಿರುವ ಅಡಿಕೆ ಮರದ ತಾತ್ಕಾಲಿಕ ಸೇತುವೆಯ ಭೀಕರ ಸ್ಥಿತಿಯನ್ನು ಮತ್ತೊಮ್ಮೆ ಬಯಲು ಮಾಡಿದೆ. ಮಳೆಗಾಲದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ದಿನನಿತ್ಯದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಈ ಅಪಾಯಕಾರಿ ಸೇತುವೆಯನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆಯಿದೆ. “ಜನಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಶಾಶ್ವತ ಸೇತುವೆ ನಿರ್ಮಿಸಿಲ್ಲ. ಇನ್ನಾದರೂ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಶಾಶ್ವತ ಸೇತುವೆ ನಿರ್ಮಿಸಬೇಕು” ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

