Breaking News

ಕಾಲೇಜು ತರಗತಿಯಲ್ಲೇ ವಿದ್ಯಾರ್ಥಿನಿಯರ ಗಲಾಟೆ; ಬೆಂಚ್‌ಗಾಗಿ ಹೊಡೆದಾಡಿಕೊಂಡು ಕಿವಿಗೆ ತೀವ್ರ ಗಾಯ, ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಕೆಜಿಎಫ್ : ಬೆಂಚ್‌ ಬದಲಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿನಿಯರ ನಡುವೆ ಆರಂಭವಾದ ಬಾಯಿಮಾತಿನ ಜಗಳ ವಿಕೋಪಕ್ಕೆ ಹೋಗಿ, ತರಗತಿಯಲ್ಲೇ ಪರಸ್ಪರ ಹಲ್ಲೆ ನಡೆಸಿಕೊಂಡಿರುವ ಆಘಾತಕಾರಿ ಘಟನೆ ನಗರದ ಮಹಾವೀರ ಜೈನ್ ಕಾಲೇಜಿನಲ್ಲಿ ನಡೆದಿದೆ.

ಮಹಾವೀರ ಜೈನ್ ಕಾಲೇಜಿನಲ್ಲಿ ಬಿಸಿಎ (BCA) ದ್ವಿತೀಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಲಿಖಿತಾ (20) ಹಾಗೂ ಶಾಲಂಪೆಸ್ಕಲ್ (20) ನಡುವೆ ಈ ಗಲಾಟೆ ಸಂಭವಿಸಿದೆ. ಕ್ಲಾಸ್‌ರೂಮ್‌ನಲ್ಲಿ ಬೆಂಚ್ ಬದಲಾಯಿಸುವ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಲಿಖಿತಾ, ಶಾಲಂಪೆಸ್ಕಲ್‌ಗೆ ಕೆನ್ನೆಗೆ ಹೊಡೆದಿದ್ದಾಳೆನ್ನಲಾಗಿದೆ.


ಲಿಖಿತಾ ಪೆಟ್ಟು ನೀಡಿದ್ದಕ್ಕೆ ಪ್ರತಿಯಾಗಿ ಶಾಲಂಪೆಸ್ಕಲ್ ಆಕೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾಳೆ. ಪರಿಣಾಮವಾಗಿ ಲಿಖಿತಾ ತರಗತಿಯಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾಳೆ. ಹಲ್ಲೆಯಿಂದಾಗಿ ಆಕೆಯ ಕಿವಿ ಹಾಗೂ ದವಡೆಯ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಘಟನೆ ನಡೆದ ಸಮಯದಲ್ಲಿ ತರಗತಿಯಲ್ಲಿ ಯಾವುದೇ ಉಪನ್ಯಾಸಕರು (Lecturer) ಇರಲಿಲ್ಲ ಎಂದು ತಿಳಿದುಬಂದಿದೆ. ತಕ್ಷಣವೇ ಇತರ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ಬಿಡಿಸಿ, ಗಾಯಗೊಂಡ ವಿದ್ಯಾರ್ಥಿನಿಯನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ: ಬಂಗಾರಪೇಟೆಯಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ

ತರಗತಿಯಲ್ಲಿ ನಡೆದ ಈ ಇಡೀ ಘಟನೆಯ ದೃಶ್ಯಾವಳಿಗಳು ಕಾಲೇಜಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ರಾಬರ್ಟ್‌ಸನ್‌ಪೇಟೆ (Robertsonpet) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *