ಬಂಗಾರಪೇಟೆಯಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ

ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಹೋಟೆಲ್‌ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಗ್ರಾಹಕರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಗಂಭೀರ ಘಟನೆಯೊಂದು ಜೂನ್ 24 ರಂದು ಬೆಳಕಿಗೆ ಬಂದಿದೆ. ಪಟ್ಟಣದ ಪ್ರಸಿದ್ಧ ಬಿಜಿಟಿ ಮಾಂಸಾಹಾರಿ ಹೋಟೆಲ್‌ನಲ್ಲಿ ನೀಡಲಾಗಿದ್ದ ಬಿರಿಯಾನಿ ಹಾಗೂ ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಇದನ್ನು ಸೇವಿಸಿದ ಇಬ್ಬರು ಗ್ರಾಹಕರು ವಾಂತಿ-ಭೇದಿಯಿಂದ ತೀವ್ರವಾಗಿ ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಲೂಕಿನ ನೇರಳೆಕೆರೆ ಗ್ರಾಮದ ನಿವಾಸಿ ಲಲಿತಾ ಎಂಬುವವರು ಬಂಗಾರಪೇಟೆ ಪಟ್ಟಣದ ಕಾರೋನೇಷನ್ ರಸ್ತೆಯಲ್ಲಿರುವ ಬಿಜಿಟಿ (BGT Non-Veg Hotel) ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಬಡಿಸಲಾಗಿದ್ದ ಬಿರಿಯಾನಿ ಮತ್ತು ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಕೂಡಲೇ ಅವರು ಹೋಟೆಲ್ ಮಾಲೀಕರ ಗಮನಕ್ಕೆ ತಂದಾಗ, ಆಡಳಿತ ಮಂಡಳಿಯು ಬೇರೆ ಬಿರಿಯಾನಿ ನೀಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದೆ ಎನ್ನಲಾಗಿದೆ. ಆದರೆ, ಹಲ್ಲಿ ಬಿದ್ದಿದ್ದ ಆಹಾರವನ್ನು ಈಗಾಗಲೇ ಸೇವಿಸಿದ್ದ ಲಲಿತಾ ಹಾಗೂ ಮತ್ತೋರ್ವ ಗ್ರಾಹಕನಿಗೆ ಕೆಲವೇ ಸಮಯದಲ್ಲಿ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಸದ್ಯ ಇಬ್ಬರನ್ನೂ ತುರ್ತಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೋಟೆಲ್ ಸಿಬ್ಬಂದಿಯ ಭೀಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಲಲಿತಾ ಆರೋಪಿಸಿದ್ದಾರೆ. ಘಟನೆಯ ಬೆನ್ನಲ್ಲೇ ಹೋಟೆಲ್‌ನಲ್ಲಿದ್ದ ಉಳಿದ ಗ್ರಾಹಕರು ಭಯದಿಂದ ಊಟ ಬಿಟ್ಟು ಹೊರನಡೆದಿದ್ದಾರೆ.

Advertisement

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಆಹಾರ ಸುರಕ್ಷತಾ ನಿರೀಕ್ಷಕ ಪ್ರತೀಶ್, ನಗರಸಭೆ ಆಯುಕ್ತ ಸತ್ಯನಾರಾಯಣ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಹೋಟೆಲ್‌ಗೆ ಜಂಟಿ ದಾಳಿ ನಡೆಸಿ ಪರಿಶೀಲಿಸಿದೆ. ಹೋಟೆಲ್‌ನ ಅಡುಗೆ ಕೋಣೆಯಲ್ಲಿ ತಯಾರಿಸಲಾಗಿದ್ದ ಆಹಾರದ ಮಾದರಿಗಳನ್ನು (Food Samples) ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಲ್ಯಾಬ್ ವರದಿ ಬರುವವರೆಗೆ ಹೋಟೆಲ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲು ಅಧಿಕಾರಿಗಳು ಆದೇಶಿಸಿದ್ದು, ಆಹಾರ ಸುರಕ್ಷತಾ ಕಾಯ್ದೆಯಡಿ ಕಟ್ಟುನಿಟ್ಟಿನ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಬುಲೆಟ್ ಕೊಳ್ಳೋ ಆಸೆ ಇರೋ ಮಧ್ಯಮ ವರ್ಗದ ಯುವಕರಿಗೆ ಬಿಗ್ ಆಫರ್!: ಕೇವಲ 1.99 ಲಕ್ಷಕ್ಕೆ ಸಿಗಲಿದೆ ರಾಯಲ್ ಎನ್‌ಫೀಲ್ಡ್

ಬಂಗಾರಪೇಟೆಯಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ತನ್ನ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅಬಕಾರಿ ಉಪಾಯುಕ್ತೆ ಸಯ್ಯದ್ ಅಜಮತ್ ಆಫ್ರೀನ್ ನೇತೃತ್ವದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಆರೋಪಿ ಚಂದ್ರ ಪ್ರಕಾಶ್ ಎಂಬಾತನನ್ನು ಬಂಧಿಸಿ, ಆತ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ (NDPS Act) ಪ್ರಕರಣ ದಾಖಲಿಸಲಾಗಿದೆ.

ಆಟೋ ಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *