ಜಮ್ಮ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಅವರ ಮೇಲೆ ಜಮ್ಮುವಿನಲ್ಲಿ ನಡೆದ ವಿವಾಹ ಸಮಾರಂಭದ ವೇಳೆ ಗುಂಡಿನ ದಾಳಿ ನಡೆಸಲು ಯತ್ನಿಸಿರುವ ಘಟನೆ ಬುಧವಾರ (ಮಾರ್ಚ್ 11) ನಡೆದಿದೆ.
ಘಟನೆ ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದ ವಕೀಲರ ವಿವಾಹ ಸಮಾರಂಭದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫಾರೂಕ್ ಅಬ್ದುಲ್ಲಾ ಮಂಟಪದ ಹೊರಗೆ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸಲು ಯತ್ನಿಸಿದ್ದಾನೆ.

ಆರೋಪಿಯನ್ನು ಕಮಲ್ ಸಿಂಗ್ ಜಮ್ವಾಲ್ ಎಂದು ಗುರುತಿಸಲಾಗಿದ್ದು, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಅವನನ್ನು ತಕ್ಷಣವೇ ಬಂಧಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿಯಿಂದ ಫಾರೂಕ್ ಅಬ್ದುಲ್ಲಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ: ತಂದೆಯ ಮನವೊಲಿಕೆಗೂ ಕರಗದ ಮನಸು; ಮುಸ್ಲಿಂ ಯುವಕನೊಂದಿಗೆ ದೇವಸ್ಥಾನದಲ್ಲಿ ಮದುವೆಯಾದ ವೈರಲ್ ಗರ್ಲ್ ಮೊನಾಲಿಸಾ
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಹಾಗೂ ಫಾರೂಕ್ ಅಬ್ದುಲ್ಲಾ ಅವರ ಪುತ್ರ ಒಮರ್ ಅಬ್ದುಲ್ಲಾ, “ದೇವರು ಕರುಣಾಮಯಿ. ನನ್ನ ತಂದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಲೋಡ್ ಮಾಡಿದ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯೊಬ್ಬರು ಅವರ ಹತ್ತಿರ ಬಂದು ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಭದ್ರತಾ ತಂಡ ತಕ್ಷಣವೇ ಮಧ್ಯಪ್ರವೇಶಿಸಿ ಹತ್ಯೆಯ ಪ್ರಯತ್ನವನ್ನು ವಿಫಲಗೊಳಿಸಿದೆ” ಎಂದು ಹೇಳಿದ್ದಾರೆ.
ಘಟನೆಯ ವೇಳೆ ಫಾರೂಕ್ ಅಬ್ದುಲ್ಲಾ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಕೂಡ ಇದ್ದರು. ಈ ವೇಳೆ ಉಂಟಾದ ಗೊಂದಲದಲ್ಲಿ ಚೌಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯು ಮದುವೆ ಮಂಟಪದ ಹೊರಭಾಗದಲ್ಲಿ ಮುಂಚಿತವಾಗಿಯೇ ಕಾಯುತ್ತಿದ್ದನು. ಫಾರೂಕ್ ಅಬ್ದುಲ್ಲಾ ಮತ್ತು ಸುರೀಂದರ್ ಚೌಧರಿ ಹೊರಗೆ ಬರುತ್ತಿದ್ದಂತೆಯೇ ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಆದರೆ ಅಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ತಕ್ಷಣವೇ ಆತನನ್ನು ತಡೆದಿದ್ದಾರೆ.
ಆರೋಪಿಯು ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಪೊಲೀಸರು ಆರೋಪಿ ಬಳಿ ಇದ್ದ ಗನ್ ಕಿತ್ತುಕೊಂಡು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಳಿಯ ಹಿಂದಿನ ಉದ್ದೇಶ ಹಾಗೂ ಹಿನ್ನೆಲೆಯನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

