ಅಪ್ರಾಪ್ತೆಯ ಅಪಹರಣ, ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ

ಕೊಪ್ಪಳ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ವಜ್ರಬಂಡಿ ಗ್ರಾಮದ ಅಪರಾಧಿ ಮಂಜುನಾಥ ಚಿಕ್ಕಗೌಡ್ರನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 70 ಸಾವಿರ ದಂಡ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ ತೀರ್ಪು ಪ್ರಕಟಿಸಿದ್ದಾರೆ.

ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ವಜ್ರಬಂಡಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತೆಯೊಂದಿಗೆ ಮಂಜುನಾಥ ಚಿಕ್ಕಗೌಡ್ರ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದನೆಂದು ತಿಳಿದುಬಂದಿದೆ. ಈ ವಿಷಯ ಸಂತ್ರಸ್ತೆಯ ಮನೆಯವರಿಗೆ ತಿಳಿದು ಮಂಜುನಾಥನಿಗೆ ಎಚ್ಚರಿಕೆ ನೀಡಿದರೂ ಸಹ 2024ರ ಮಾರ್ಚ್ 17ರಂದು ರಾತ್ರಿ ಸುಮಾರು 9 ಗಂಟೆ ವೇಳೆ ವಜ್ರಬಂಡಿ ಗ್ರಾಮದ ಗೋಡೌನ್ ಸಮೀಪಕ್ಕೆ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದಾನೆ.

Advertisement

ಅಲ್ಲಿಂದ ತನ್ನ ಮೋಟಾರ್ ಸೈಕಲ್‌ನಲ್ಲಿ ಹೊಸಪೇಟೆಗೆ ಕರೆದುಕೊಂಡು ಹೋಗಿ, ಬಳಿಕ ಬಸ್ ಮೂಲಕ ಬೆಂಗಳೂರು ಮತ್ತು ಮೈಸೂರು ಭಾಗಗಳಲ್ಲಿ ತಿರುಗಾಡಿ ಮತ್ತೆ ಹೊಸಪೇಟೆಗೆ ಬಂದಿದ್ದಾರೆ. ನಂತರ ಬೈಕ್‌ನಲ್ಲಿ ಕೊಪ್ಪಳಕ್ಕೆ ಬಂದು ಪಾರ್ಥ ಲಾಡ್ಜ್‌ನಲ್ಲಿ ಅಣ್ಣ-ತಂಗಿ ಎಂದು ಸುಳ್ಳು ಹೇಳಿ ಕೊಠಡಿ ಪಡೆದುಕೊಂಡು, ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದಲ್ಲದೆ ಹೊಸಪೇಟೆ ಮಾರ್ಗದ ಕಲ್ಯಾಣಿ ಫ್ಯಾಕ್ಟರಿ ಗುಡ್ಡದ ಸಮೀಪವೂ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯಪ್ರತಾಪ ದೂರು ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದ್ದರು. ಬಳಿಕ ಕೊಪ್ಪಳ ಡಿಎಸ್‌ಪಿ ಮುತ್ತಣ್ಣ ಸವರಗೋಳ ಹಾಗೂ ಸಿದ್ದಲಿಂಗಪ್ಪಗೌಡ ಪಾಟೀಲ ಮುಂದಿನ ತನಿಖೆ ನಡೆಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಡಿಎಸ್‌ಪಿ ಕಚೇರಿಯ ಸಿಎಚ್‌ಸಿ ಶಿವಕುಮಾರ ಕಾರ್ಯನಿರ್ವಹಿಸಿದ್ದರು.

ಸ್ಪೆಷಲ್ ಎಸ್‌ಸಿ (ಪೋಕ್ಸ್) ಪ್ರಕರಣದಡಿ ದಾಖಲಾಗಿದ್ದ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು. ಯಲಬುರ್ಗಾ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ವಿಜಯಲಕ್ಷ್ಮೀ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಮಹತ್ವದ ಸಹಕಾರ ನೀಡಿದರು ಎಂದು ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು