ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಜಾಗತಿಕ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ನೈಸರ್ಗಿಕ ಅನಿಲದ ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಈ ಸಂಬಂಧ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA – Essential Services Maintenance Act) ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿ ಗ್ಯಾಸ್ ಪೂರೈಕೆಗೆ ಸಂಬಂಧಿಸಿದ ಹೊಸ ಆದೇಶ ಹೊರಡಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಬರುವ ಎಲ್ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಪೂರೈಕೆಯಲ್ಲಿ ಅಡೆತಡೆಗಳು ಎದುರಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಈ ಆದೇಶದ ಪ್ರಕಾರ ದೇಶದಲ್ಲಿ ಗ್ಯಾಸ್ ಕೊರತೆ ಉಂಟಾದರೆ ಮೊದಲು ಮನೆಗಳಿಗೆ ಪೂರೈಸುವ ಪಿಎನ್‌ಜಿ (Piped Natural Gas), ಸಾರಿಗೆಗೆ ಬಳಸುವ ಸಿಎನ್‌ಜಿ (Compressed Natural Gas) ಮತ್ತು ಎಲ್‌ಪಿಜಿ ಉತ್ಪಾದನೆಗೆ ಅಗತ್ಯವಾದ ಅನಿಲಕ್ಕೆ ಆದ್ಯತೆ ನೀಡಲಾಗುತ್ತದೆ. ನಂತರ ಉಳಿದ ಅನಿಲವನ್ನು ಕೈಗಾರಿಕಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಮಂಗಳೂರು ಜನರ ಗಮನಕ್ಕೆ ಈ ಹೋಟೆಲ್ನಲ್ಲಿ ಮಧ್ಯಾಹ್ನದ ಊಟ ಇರುವುದಿಲ್ಲ
ಇದರೊಂದಿಗೆ ಪ್ರಮುಖ ಕ್ಷೇತ್ರಗಳಿಗೆ ನೈಸರ್ಗಿಕ ಅನಿಲದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಅದರಂತೆ ಗೊಬ್ಬರ ಕಾರ್ಖಾನೆಗಳಿಗೆ ಕಳೆದ ಆರು ತಿಂಗಳ ಸರಾಸರಿ ಬಳಕೆಯ ಸುಮಾರು 70 ಶೇಕಡಾ ಗ್ಯಾಸ್ ಪೂರೈಕೆ ಖಚಿತಪಡಿಸಲಾಗುತ್ತದೆ. ಚಹಾ ಉದ್ಯಮ, ಉತ್ಪಾದನಾ ವಲಯ ಹಾಗೂ ಇತರ ಕೈಗಾರಿಕೆಗಳಿಗೆ ಸುಮಾರು 80 ಶೇಕಡಾ ಗ್ಯಾಸ್ ಪೂರೈಕೆ ನೀಡಲಾಗುತ್ತದೆ.
ಇದಕ್ಕೆ ವಿರುದ್ಧವಾಗಿ ಪೆಟ್ರೋಕೆಮಿಕಲ್ ಮತ್ತು ವಿದ್ಯುತ್ ಉತ್ಪಾದನಾ ವಲಯಗಳಿಗೆ ಪೂರೈಕೆಯಾಗುವ ಅನಿಲವನ್ನು ಕಡಿತಗೊಳಿಸಿ, ಅದನ್ನು ಪ್ರಮುಖ ಅಗತ್ಯ ಕ್ಷೇತ್ರಗಳಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರವು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಂಪನಿಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಸೂಚನೆ ನೀಡಿದೆ. ಪ್ರಮುಖ ಹೈಡ್ರೋಕಾರ್ಬನ್ ಮೂಲಗಳನ್ನು ಎಲ್ಪಿಜಿ ಉತ್ಪಾದನೆಗೆ ಬಳಸುವಂತೆ ನಿರ್ದೇಶನ ನೀಡಲಾಗಿದೆ.
ಎಸ್ಮಾ ಕಾಯ್ದೆಯು ಸಾರ್ವಜನಿಕರ ದೈನಂದಿನ ಜೀವನಕ್ಕೆ ಅಗತ್ಯವಾಗಿರುವ ಪ್ರಮುಖ ಸೇವೆಗಳ ನಿರಂತರ ಕಾರ್ಯಾಚರಣೆಯನ್ನು ಖಚಿತಪಡಿಸಲು ರೂಪಿಸಲಾದ ಕಾನೂನು. ಸಾರಿಗೆ, ಆರೋಗ್ಯ ಸೇವೆ, ಆಸ್ಪತ್ರೆಗಳು ಮತ್ತು ಇತರ ಅವಶ್ಯಕ ಸೇವೆಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಈ ಸೇವೆಗಳಿಗೆ ಅಡಚಣೆ ಉಂಟಾದರೆ ಜನಜೀವನದ ಮೇಲೆ ನೇರ ಪರಿಣಾಮ ಬೀಳುವ ಕಾರಣ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬಹುದು. ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಹಾಹಾಕಾರ: ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ತುರ್ತು ಪತ್ರ
ಎಸ್ಮಾ ಅಡಿಯಲ್ಲಿ ಬರುವ ಪ್ರಮುಖ 5 ಸೇವೆಗಳು:
- ಸಾರ್ವಜನಿಕ ಸಾರಿಗೆ: ಬಸ್, ರೈಲು ಹಾಗೂ ವಿಮಾನ ಯಾನ ಸೇವೆಗಳು.
- ಆರೋಗ್ಯ ಸೇವೆಗಳು: ವೈದ್ಯರು, ದಾದಿಯರು ಮತ್ತು ಆಸ್ಪತ್ರೆಗಳ ತುರ್ತು ಸೇವೆಗಳು.
- ಮೂಲಸೌಕರ್ಯ: ನೀರು ಸರಬರಾಜು, ನೈರ್ಮಲ್ಯ ಮತ್ತು ವಿದ್ಯುತ್ ಶಕ್ತಿ ವಿತರಣೆ.
- ಉತ್ಪಾದನಾ ಘಟಕಗಳು: ಪೆಟ್ರೋಲಿಯಂ, ಕಲ್ಲಿದ್ದಲು, ಉಕ್ಕು ಮತ್ತು ರಸಗೊಬ್ಬರ ಉತ್ಪಾದನೆ ಹಾಗೂ ವಿತರಣೆ.
- ಹಣಕಾಸು ಮತ್ತು ಆಹಾರ: ಬ್ಯಾಂಕಿಂಗ್ ಸೇವೆಗಳು ಮತ್ತು ಸಾರ್ವಜನಿಕ ಆಹಾರ ಧಾನ್ಯಗಳ ವಿತರಣಾ ವ್ಯವಸ್ಥೆ.
ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ
- ವಾರೆಂಟ್ ಇಲ್ಲದೆ ಬಂಧನ: ಈ ಕಾಯ್ದೆಯಡಿ ಯಾವುದೇ ಪೊಲೀಸ್ ಅಧಿಕಾರಿಗೆ ಮುಷ್ಕರ ನಿರತರನ್ನು ಅಥವಾ ಪ್ರಚೋದನೆ ನೀಡುವವರನ್ನು ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರವಿರುತ್ತದೆ.
- ಜೈಲು ಮತ್ತು ದಂಡ: ನಿಯಮ ಮೀರಿದವರಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಭಾರಿ ಮೊತ್ತದ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
- ಕೆಲಸದಿಂದ ವಜಾ: ಮುಷ್ಕರದಲ್ಲಿ ಪಾಲ್ಗೊಂಡ ಅಥವಾ ಕೆಲಸಕ್ಕೆ ಅಡ್ಡಿಪಡಿಸಿದ ನೌಕರರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸದಿಂದ ವಜಾ ಮಾಡುವ ಅಧಿಕಾರ ಸರ್ಕಾರಕ್ಕಿದೆ.
- ಅವಧಿ: ಒಮ್ಮೆ ಜಾರಿಯಾದ ಈ ಕಾನೂನು ಗರಿಷ್ಠ 6 ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಕೆಲವು ದೇಶಗಳಲ್ಲಿ ತೈಲ ಡಿಪೋಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದ್ದು, ಕೆಲವು ತೈಲ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆ ಕುಂಠಿತಗೊಂಡಿದ್ದು, ಬೇಡಿಕೆ ಹೆಚ್ಚುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೂ ಪ್ರಸ್ತುತ ಭಾರತದಲ್ಲಿ ಸುಮಾರು 40 ದಿನಗಳಿಗೆ ಸಾಕಾಗುವಷ್ಟು ಎಲ್‌ಪಿಜಿ ಬಫರ್ ಸ್ಟಾಕ್ ಲಭ್ಯವಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಜೊತೆಗೆ ಭಾರತವು ಮಧ್ಯಪ್ರಾಚ್ಯ ದೇಶಗಳಷ್ಟೇ ಅಲ್ಲದೆ ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದಲೂ ಎಲ್ಎನ್‌ಜಿ ಆಮದು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿದೆ.
ಈ ಹಿನ್ನೆಲೆ ನಾಗರಿಕರು ಮುಂದಿನ ಕೆಲವು ದಿನಗಳ ಕಾಲ ಗ್ಯಾಸ್ ಬಳಕೆಯನ್ನು ಮಿತವಾಗಿ ಮಾಡಬೇಕು ಎಂದು ಪೆಟ್ರೋಲಿಯಂ ಸಚಿವಾಲಯ ಮನವಿ ಮಾಡಿದೆ. ಎಸ್ಮಾ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವೂ ಇದೆ ಎಂದು ಸರ್ಕಾರ ಎಚ್ಚರಿಸಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

