ಸುಳ್ಯ: ಕೇರಳದ ತಿರುವನಂತಪುರಂನ ಚಂದ್ರಶೇಖರನ್ ನಾಯರ್ ಸ್ಟೇಡಿಯಂ ಮತ್ತು ಯುನಿವರ್ಸಿಟಿ ಸ್ಟೇಡಿಯಂನಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (MAFI) ಆಯೋಜಿಸಿದ 46ನೇ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆಯ ದೇರಂಪಾಲಿನ ಸರಸ್ವತಿ ಕಾಮತ್ ಅವರು ಮೂರು ಬೆಳ್ಳಿ ಪದಕಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಸರಸ್ವತಿ ಕಾಮತ್, ಹರ್ಡಲ್ಸ್ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅದರಂತೆ, ಉತ್ತರ ಕೊರಿಯಾದ ಟ್ಯಾಗೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಬಂಟ್ವಾಳದ ಚೈತನ್ಯಾಳಿಗೆ 5ನೇ ಸ್ಥಾನ
ಸುಳ್ಯ ತಾಲೂಕಿನ ಬೆಳ್ಳಾರೆಯ ದೇರಂಪಾಲುವಿನ ಚಂದ್ರಶೇಖರ್ ಕಾಮತ್ ಅವರ ಪತ್ನಿಯಾಗಿರುವ ಸರಸ್ವತಿ ಕಾಮತ್ ಅವರು ಮಾಜಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ರಾಜಕೀಯ, ಕೃಷಿ ಹಾಗೂ ಮೆಡಿಕಲ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಇವರು, ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.
ಈ ಹಿಂದೆ ವಿವಿಧ ಕಡೆಗಳಲ್ಲಿ ನಡೆದ ಡಿಸ್ಕಸ್ ಥ್ರೋ, ಹರ್ಡಲ್ಸ್, ಜಾವಲಿನ್ ಥ್ರೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

