ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ತಾಂತ್ರಿಕ ಎಡವಟ್ಟು ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಮೃತಪಟ್ಟಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಅಂದಾಜು 22 ಕೋಟಿ ರೂಪಾಯಿ ಹಣ ಜಮೆಯಾಗಿರುವುದು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ಶಾಕಿಂಗ್ ಮಾಹಿತಿ ಬಹಿರಂಗಗೊಂಡಿದೆ. ಮೃತಪಟ್ಟವರ ಹೆಸರಿನಲ್ಲೂ ಹಣ ವರ್ಗಾವಣೆಯಾಗುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು, ಮೃತ ಫಲಾನುಭವಿಗಳ ಪಟ್ಟಿಯನ್ನು ತಕ್ಷಣ ಸಿದ್ಧಪಡಿಸಿ, ಜಮೆಯಾಗಿರುವ ಹಣವನ್ನು ಸರ್ಕಾರಕ್ಕೆ ಮರಳಿ ಪಡೆಯಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ದೇವಸ್ಥಾನಗಳ ಆದಾಯದಲ್ಲಿ ನವ ದಾಖಲೆ: ಕುಕ್ಕೆಗೆ 167 ಕೋಟಿ ರೂ., ಕೊಲ್ಲೂರಿಗೆ 85 ಕೋಟಿ ರೂ. ಕಾಣಿಕೆ!
ಮೃತಪಟ್ಟವರ ಖಾತೆಗಳಲ್ಲದೆ, ದೀರ್ಘಕಾಲದಿಂದ ಬಳಕೆಯಲ್ಲಿಲ್ಲದ (Inoperative) ಖಾತೆಗಳಿಗೂ ಹಣ ವರ್ಗಾವಣೆಯಾಗುತ್ತಿರುವುದು ರಾಜ್ಯ ಕಚೇರಿಯಿಂದ ಬಂದ ಮಾಹಿತಿಯಿಂದ ದೃಢಪಟ್ಟಿದೆ. ಸರ್ಕಾರದ ಹಣ ದುರುಪಯೋಗವಾಗದಂತೆ ತಡೆಯಲು ತಕ್ಷಣವೇ ಡೇಟಾ ಅಪ್‌ಡೇಟ್ ಮಾಡುವಂತೆ ಮತ್ತು ಮೃತಪಟ್ಟವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


