ದೆಹಲಿಯ ಸೌತ್ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿ ಒಂದು ಭಯಾನಕ ಘಟನೆಯೊಂದು ನಡೆದಿದೆ. 45 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮನೆಯ ಬೀಗದ ಕೀ (Keys) ತೆಗೆದುಕೊಳ್ಳಲು ಹೋಗುವ ಭರದಲ್ಲಿ ಆಕಸ್ಮಿಕವಾಗಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ವ್ಯಕ್ತಿ ತನ್ನ ಫ್ಲಾಟ್‌ನ ಒಳಗೆ ಬೀಗದ ಕೀ ಮರೆತು ಹೊರಬಂದಿದ್ದರು. ಮನೆಗೆ ಹೋಗಲು ಅವರು ಪಕ್ಕದ ಫ್ಲಾಟ್‌ನ ಬಾಲ್ಕನಿಯಿಂದ ತಮ್ಮ ಫ್ಲಾಟ್‌ಗೆ ಜಿಗಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿದೆ. ಇನ್ನು ಇವರನ್ನು ರಕ್ಷಣೆ ಮಾಡಲು ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಓಡಿ ಬಂದಿದ್ದಾರೆ. ತಕ್ಷಣ ಅವರ ಕೈಯನ್ನು ಹಿಡಿದಿದ್ದಾರೆ. ಈ ವೇಳೆ ಕೈ ಜಾರಿ ವ್ಯಕ್ತಿ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಇದು ಆಕಸ್ಮಿಕ ಅಪಘಾತವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಸಂಗ್ರಹಿಸಲಾಗಿದೆ. ಬೀಗದ ಕೈಗಾಗಿ ಪ್ರಾಣವನ್ನು ಪಣಕ್ಕಿಟ್ಟು ಸಾಹಸ ಮಾಡಲು ಹೋಗಿದ್ದು ಇಡೀ ಕುಟುಂಬಕ್ಕೆ ದೊಡ್ಡ ದುರಂತವನ್ನು ತಂದೊಡ್ಡಿದೆ. ಇನ್ನು ಪೊಲೀಸರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಘಟನಾ ಸ್ಥಳದ ಪರೀಕ್ಷೆ ನಡೆಸಿದಾಗ ಮತ್ತು ಮೃತರ ಹಿನ್ನೆಲೆಯನ್ನು ಗಮನಿಸಿದಾಗ, ಇದರಲ್ಲಿ ಯಾವುದೇ ಕ್ರಿಮಿನಲ್ ಪಿತೂರಿ ಅಥವಾ ಉದ್ದೇಶಪೂರ್ವಕ ಹತ್ಯೆಯ ಕುರುಹುಗಳು ಕಂಡುಬಂದಿಲ್ಲ.

ಇದನ್ನೂ ಓದಿ: ನಂತೂರಿನಲ್ಲಿ ಭೀಕರ ಅಪಘಾತ: ಅಮ್ಮನ ಮುಂದೆಯೇ ಪ್ರಾಣ ಬಿಟ್ಟ ಮಗಳು, ಕಳಚಿಕೊಂಡಿತು ಕುಟುಂಬದ ಆಧಾರ
ಸೆಕ್ಯೂರಿಟಿ ಗಾರ್ಡ್ ನೀಡಿದ ಹೇಳಿಕೆಯೇ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಗಾರ್ಡ್ ಆ ವ್ಯಕ್ತಿಯನ್ನು ಉಳಿಸಲು ಕೊನೆಯ ಕ್ಷಣದವರೆಗೆ ಪ್ರಯತ್ನಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದೃಢಪಟ್ಟಿದೆ. ಹಾಗಾಗಿ, ಇದು ಅಜಾಗರೂಕತೆಯಿಂದ ನಡೆದ ಅಪಘಾತ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯಲ್ಲಿ ತಲೆಗೆ ಆದ ತೀವ್ರ ಪೆಟ್ಟು ಮತ್ತು ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

