ಪುತ್ತೂರು: ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿಗೆ ಪುತ್ತೂರಿನಲ್ಲಿ ತಾತ್ಕಾಲಿಕವಾಗಿ (ಟ್ರಯಲ್ ರನ್) ನಿಲುಗಡೆ ಒದಗಿಸಿರುವುದು ಅತ್ಯಂತ ಸಂತೋಷದ ವಿಚಾರವಾಗಿದ್ದು, ಈ ನಿಲುಗಡೆಯನ್ನು ಶಾಶ್ವತಗೊಳಿಸಲು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ (MLC) ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಿಲುಗಡೆಗಾಗಿ ಶ್ರಮಿಸಿದ ರೈಲ್ವೆ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.
ರೈಲ್ವೆ ಹೋರಾಟಗಾರರ ಶ್ರಮಕ್ಕೆ ಸಂದ ಜಯ
“ಇತ್ತೀಚೆಗೆ ಪುತ್ತೂರು-ಸುಬ್ರಹ್ಮಣ್ಯ ಮಾರ್ಗದ ರೈಲು ಪ್ರಯಾಣಿಕರು, ಪತ್ರಕರ್ತರು ಹಾಗೂ ರೈಲ್ವೆ ಹೋರಾಟಗಾರರು ನನ್ನೊಂದಿಗೆ ವರ್ಚುವಲ್ ಸಭೆ ನಡೆಸಿ, ಪುತ್ತೂರು ಭಾಗದ ರೈಲ್ವೆ ಸಮಸ್ಯೆಗಳು ಹಾಗೂ ವಂದೇ ಭಾರತ್ ನಿಲುಗಡೆಯ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಅವರ ಈ ಕಾಳಜಿ ಹಾಗೂ ನಿರಂತರ ಹೋರಾಟವೇ ನಮ್ಮ ಪ್ರಯತ್ನಗಳಿಗೆ ದಾರಿಯಾಯಿತು,” ಎಂದು ಕಿಶೋರ್ ಕುಮಾರ್ ಸ್ಮರಿಸಿದ್ದಾರೆ.
ಸಭೆಯ ಬಳಿಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ನೈಋತ್ಯ ರೈಲ್ವೆ (SWR) ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು. ಈ ಶ್ರಮದ ಫಲವಾಗಿ ಇದೀಗ ಪುತ್ತೂರಿನಲ್ಲಿ ವಂದೇ ಭಾರತ್ ರೈಲಿಗೆ ತಾತ್ಕಾಲಿಕ ನಿಲುಗಡೆ ಲಭಿಸಿದೆ.
ವೇಳಾಪಟ್ಟಿ ಬದಲಾವಣೆಗೆ ಬಲವಾದ ಆಗ್ರಹ
ಪುತ್ತೂರಿನಲ್ಲಿ ನಿಲುಗಡೆ ಸಿಕ್ಕಿರುವುದು ಸ್ವಾಗತಾರ್ಹವಾದರೂ, ಪ್ರಯಾಣಿಕರ ಗರಿಷ್ಠ ಅನುಕೂಲಕ್ಕಾಗಿ ರೈಲಿನ ಸಮಯ ಬದಲಾಗಬೇಕಿದೆ ಎಂದು ಎಂಎಲ್ಸಿ ಪ್ರತಿಪಾದಿಸಿದ್ದಾರೆ. ಪ್ರಸ್ತುತ ರೈಲು ಬೆಳಿಗ್ಗೆ ಬೆಂಗಳೂರಿನಿಂದ ಹೊರಡುತ್ತಿದೆ. ಇದರ ಬದಲಾಗಿ, ಕರಾವಳಿಯಿಂದ (ಮಂಗಳೂರು/ಪುತ್ತೂರು) ಬೆಳಿಗ್ಗೆ ಹೊರಟು ಮಧ್ಯಾಹ್ನ ಅಥವಾ ಸಂಜೆ ಬೆಂಗಳೂರಿನಿಂದ ವಾಪಸ್ ಬರುವಂತೆ ವೇಳಾಪಟ್ಟಿ ನಿಗದಿಯಾಗಬೇಕು. ಇದರಿಂದ ಬೆಂಗಳೂರಿನಲ್ಲಿರುವ ಐಟಿ-ಬಿಟಿ ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ವಾರಾಂತ್ಯದಲ್ಲಿ ಊರಿಗೆ ಬರುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಮತ್ತು ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದೆ.
ಇದನ್ನೂ ಓದಿ: ಸಿಂಹದ ಜೊತೆ ಸ್ಟಂಟ್ಗೆ ಹೋದ ಕನ್ನಡ ನಟ ಕಿರಣ್ ರಾಜ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವೀಡಿಯೋ
ಶಾಶ್ವತ ನಿಲುಗಡೆಗೆ ಗ್ರೀನ್ ಸಿಗ್ನಲ್
‘ಬಳ್ಳಾರಿ ಚಲೋ’ ಯಾತ್ರೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೊಂದಿಗೆ ಈ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. “ಪುತ್ತೂರಿನಲ್ಲಿ ವಂದೇ ಭಾರತ್ ಶಾಶ್ವತ ನಿಲುಗಡೆ, ಸಮಯ ಬದಲಾವಣೆ ಹಾಗೂ ಪುತ್ತೂರು ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಯ ಕುರಿತು ತಕ್ಷಣವೇ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದು, ಸಂಸದರು ಪುತ್ತೂರಿನಲ್ಲಿ ಶಾಶ್ವತ ನಿಲುಗಡೆ ನೀಡಲು ಅಧಿಕೃತವಾಗಿ ಸಮ್ಮತಿಸಿ ಗ್ರೀನ್ ಸಿಗ್ನಲ್ ನೀಡಿದ್ದಾರೆ,” ಎಂದು ಕಿಶೋರ್ ಕುಮಾರ್ ಪುತ್ತೂರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

