ಮಂಗಳೂರು: ಕೊಲೆ ಮತ್ತು ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 9 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ರೌಡಿಶೀಟರ್ ಸಫ್ವಾನ್ ಹುಸೈನ್ನ ಸಹಚರನನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಬಳ್ಳಾರಿ ಮೂಲದ ಸೂಫೀಯಾನ್ ಹುಸೇನ್ ಅಲಿಯಾಸ್ ಕೊಟ್ರೇಶಿ (31) ಎಂದು ಗುರುತಿಸಲಾಗಿದೆ. ಈತ ಮೂಲತಃ ಬಳ್ಳಾರಿಯವನಾಗಿದ್ದು, ಬೆಂಗಳೂರಿನ ಡಿ.ಜೆ. ಹಳ್ಳಿಯ ಶ್ಯಾಮ್ಪುರದಲ್ಲಿ ವಾಸವಾಗಿದ್ದ ಎನ್ನಲಾಗಿದೆ.

ಪೊಲೀಸರ ಮಾಹಿತಿಯಂತೆ, ಸೂಫೀಯಾನ್ ಕಳೆದ ಹಲವು ವರ್ಷಗಳಿಂದ ಕಲಬುರಗಿ, ಬಳ್ಳಾರಿ, ಮುಂಬೈ ಮತ್ತು ಆಂಧ್ರಪ್ರದೇಶದಾದ್ಯಂತ ಅಲೆದಾಡಿದ್ದ. ಅಂತಿಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಈತ, ತನ್ನ ಹೆಸರನ್ನು ‘ಹುಸೇನ್’ ಎಂದು ಬದಲಾಯಿಸಿಕೊಂಡಿದ್ದ. ಅಷ್ಟೇ ಅಲ್ಲದೆ, ನಕಲಿ ದಾಖಲೆಗಳ ಮೂಲಕ ಆಧಾರ್ ಕಾರ್ಡ್, ಪಾಸ್ಪೋರ್ಟ್ ಮತ್ತು ಚಾಲನಾ ಪರವಾನಗಿ (DL) ಪಡೆದಿದ್ದ. ಸ್ಥಳೀಯ ಮಹಿಳೆಯೊಬ್ಬರನ್ನು ಮದುವೆಯಾಗಿ ಯಾರಿಗೂ ಸಂಶಯ ಬರದಂತೆ ಸಂಸಾರ ನಡೆಸುತ್ತಿದ್ದ.
ಇದನ್ನೂ ಓದಿ: ಕಾಸರಗೋಡು: ಮೊಬೈಲ್ ರಿಪೇರಿ ಮಾಡಿಕೊಡದ್ದಕ್ಕೆ ಮನನೊಂದು 17ರ ಪಿಯುಸಿ ವಿದ್ಯಾರ್ಥಿನಿ ಆತ್ಮ*ಹತ್ಯೆ
ಈತ ಈ ಹಿಂದೆ ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದಾಗ ಕುಖ್ಯಾತ ರೌಡಿಶೀಟರ್ ಸಫ್ವಾನ್ ಹುಸೈನ್ ಗ್ಯಾಂಗ್ ಸೇರಿಕೊಂಡಿದ್ದ ಈತನ ಮೇಲೆ ಸುರತ್ಕಲ್, ಬಜ್ಪೆ, ಬಳ್ಳಾರಿ ಮತ್ತು ಹೊಸಪೇಟೆ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕಳ್ಳತನ ಮತ್ತು ದರೋಡೆಯಂತಹ ಹಲವು ಪ್ರಕರಣಗಳು ದಾಖಲಾಗಿವೆ.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ತಂಡವು ಬೆಂಗಳೂರಿನ ಡಿ.ಜೆ. ಹಳ್ಳಿಯ ರೈಲ್ವೆ ಗೇಟ್ ಬಳಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಸದ್ಯ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಸುರತ್ಕಲ್ ಪೊಲೀಸರಿಗೆ ಒಪ್ಪಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

