ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಮತ್ತೆ ರಕ್ತಪಾತ ಸಂಭವಿಸಿದ್ದು, ಜನನಿಬಿಡ ಪ್ರದೇಶದಲ್ಲೇ ರೌಡಿಶೀಟರ್ ಒಬ್ಬನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಲಾಗಿದೆ. ನಗರದ ಲಾಲ್‌ಬಾಗ್ ಜಂಕ್ಷನ್ ಸಮೀಪ ಮಧ್ಯಾಹ್ನ ಸುಮಾರು 1:45ರ ವೇಳೆಗೆ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ದಾಳಿಗೊಳಗಾದ ಯುವಕನನ್ನು ವಿವಿಧ ಗಾಂಜಾ ಮತ್ತು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ರೌಡಿಶೀಟರ್ ವಿಕ್ಕಿ ಬಪ್ಪಲ್ (ವಿಖ್ಯಾತ್) ಎಂದು ಗುರುತಿಸಲಾಗಿದೆ.
ಲಾಲ್‌ಬಾಗ್ ಬಳಿ ವಿಕ್ಕಿ ಬಪ್ಪಲ್ ಒಬ್ಬಂಟಿಯಾಗಿ ನಿಂತಿದ್ದಾಗ, ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿ ಏಕಾಏಕಿ ತಲ್ವಾರ್‌ನಿಂದ ದಾಳಿ ಮಾಡಿದ್ದಾನೆ.
ದುಷ್ಕರ್ಮಿಯು ವಿಕ್ಕಿ ಬಪ್ಪಲ್‌ನ ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ತಲ್ವಾರ್‌ನಿಂದ ಬೀಸಿ ಹಲ್ಲೆ ನಡೆಸಿ, ಸ್ಥಳದಿಂದ ಬೈಕ್‌ನಲ್ಲಿ ಚಾಲಾಕಿತನದಿಂದ ಪರಾರಿಯಾಗಿದ್ದಾನೆ.
ರಕ್ತಸಿಕ್ತಗೊಂಡು ಬಿದ್ದಿದ್ದ ಗಾಯಾಳುವನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಗದಗದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೋಷಕರ ಗಂಭೀರ ಆರೋಪ
ಬರ್ಕೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿ ನಡೆಸಿದ ದುಷ್ಕರ್ಮಿಯ ಪತ್ತೆಗೆ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಬಲೆ ಬೀಸಿದ್ದಾರೆ. ಹಳೆಯ ಹಗೆತನ ಅಥವಾ ಡ್ರಗ್ಸ್ ಜಾಲದ ವೈಷಮ್ಯ ಈ ದಾಳಿಗೆ ಕಾರಣವೇ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

