ಪಂಜಾಬ್: ಪಂಜಾಬ್‌ನ ಹೊಶಿಯಾರ್‌ಪುರ ಜಿಲ್ಲೆಯ ಚಾಕ್ ಸಮಾನಾ ಗ್ರಾಮದಲ್ಲಿ ತೆರೆದ ಬೋರ್‌ವೆಲ್‌ಗೆ ಬಿದ್ದು ಸಿಲುಕಿಕೊಂಡಿದ್ದ ನಾಲ್ಕು ವರ್ಷದ ಪುಟ್ಟ ಬಾಲಕನನ್ನು ಸುಮಾರು 9 ಗಂಟೆಗಳ ಸತತ ಜಂಟಿ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಹೊರತರಲಾಗಿದೆ. ಶುಕ್ರವಾರ ಸಂಜೆ ನಡೆದ ಈ ಘಟನೆ ಇಡೀ ದೇಶದ ಗಮನ ಸೆಳೆದಿತ್ತು.
ಕೂಲಿ ಕಾರ್ಮಿಕರಾದ ಹರಿಂದರ್ ಮತ್ತು ಆಶಾ ದಂಪತಿಯ 4 ವರ್ಷದ ಪುತ್ರ ಗುರ್ಕರನ್ ಸಿಂಗ್ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ, ಇತ್ತೀಚೆಗಷ್ಟೇ ತೋಡಲಾಗಿದ್ದ ಹಾಗೂ ಸರಿಯಾಗಿ ಮುಚ್ಚದಿದ್ದ ಸುಮಾರು 250 ಅಡಿ ಆಳದ ಬೋರ್‌ವೆಲ್‌ಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಮಗು ಸುಮಾರು 30 ಅಡಿ ಆಳದಲ್ಲಿ ಸಿಲುಕಿಕೊಂಡಿರುವುದು ಪತ್ತೆಯಾಗಿತ್ತು
ಇದನ್ನೂ ಓದಿ: ಪತ್ನಿಯ ಕಣ್ಣೆದುರೇ ಯಮುನಾ ನದಿಯಲ್ಲಿ ಮುಳುಗಿ ಪತಿ ಸಾವು!
ಘಟನೆ ತಿಳಿಯುತ್ತಿದ್ದಂತೆಯೇ ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF), ಪಂಜಾಬ್ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಮಗುವಿಗೆ ಪೈಪ್ ಮೂಲಕ ನಿರಂತರವಾಗಿ ಆಮ್ಲಜನಕವನ್ನು (Oxygen) ಸರಬರಾಜು ಮಾಡಲಾಯಿತು. ಮಗು ಧೃತಿಗೆಡದಂತೆ ತಡೆಯಲು ಆತನ ತಾಯಿಯ ಧ್ವನಿಯನ್ನು ಪೈಪ್ ಮೂಲಕ ಕೇಳಿಸಲಾಯಿತು. ಬೋರ್‌ವೆಲ್‌ಗೆ ಸಮಾಂತರವಾಗಿ 30 ಅಡಿ ಆಳದ ಮತ್ತೊಂದು ಗುಂಡಿ ತೋಡಿ, ಅಲ್ಲಿಂದ ಸುರಂಗದ ಮೂಲಕ ಮಗುವನ್ನು ಶನಿವಾರ ಮುಂಜಾನೆ 12:40 ರ ಸುಮಾರಿಗೆ ಸುರಕ್ಷಿತವಾಗಿ ಹೊರಗೆ ಎಳೆತರಲಾಯಿತು.
ಮಣ್ಣಿನಿಂದ ಆವೃತವಾಗಿದ್ದರೂ ಮಗು ಸದ್ಯ ಸ್ಥಿರವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಸುರಕ್ಷಿತವಾಗಿ ಹೊರಬರುತ್ತಿದ್ದಂತೆ ಗ್ರಾಮಸ್ಥರು ಮತ್ತು ಪೋಷಕರು ನಿಟ್ಟುಸಿರು ಬಿಟ್ಟಿದ್ದು, ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


