ಮೂಡುಬಿದಿರೆ : ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮೂಡುಬಿದಿರೆಯ 15 ವರ್ಷದ ಪೋರಿ ವಿಷ್ಣುಪ್ರಿಯಾ ಪೈ ಸಾಬೀತುಪಡಿಸಿದ್ದಾರೆ. ಕೇವಲ 15 ದಿನಗಳ ಕಾಲಾವಧಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ 51 ಶಾಲೆಗಳಿಗೆ ಭೇಟಿ ನೀಡಿ ಸುಮಾರು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ಹಾಗೂ ಮಾನಸಿಕ ಜಾಗೃತಿ ಕಾರ್ಯಾಗಾರ ನಡೆಸುವ ಮೂಲಕ ಪ್ರತಿಷ್ಠಿತ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ (Golden Book of World Records) ಪುಟಕ್ಕೆ ಸೇರಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ವಿಷ್ಣುಪ್ರಿಯಾ, ಹದಿಹರೆಯದ ವಿದ್ಯಾರ್ಥಿಗಳು ಎದುರಿಸುವ ಶೈಕ್ಷಣಿಕ ಒತ್ತಡ, ಗೊಂದಲ ಹಾಗೂ ಪರೀಕ್ಷಾ ಭಯವನ್ನು ನಿವಾರಿಸುವ ಉದ್ದೇಶದಿಂದ ಈ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದ್ದರು.
15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ – ಸುದೀರ್ಘ ಅಭಿಯಾನ:
ಆಗಸ್ಟ್ 24 ರಿಂದ ಸೆಪ್ಟೆಂಬರ್ 11 ರವರೆಗೆ ನಡೆದ ಈ ಜಾಗೃತಿ ಅಭಿಯಾನದಲ್ಲಿ ವಿಷ್ಣುಪ್ರಿಯಾ ಅವರು ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿದ್ದರು.
ವಿಶೇಷ ತರಬೇತಿ: ಪ್ರತಿದಿನ ವಿವಿಧ ಶಾಲೆಗಳ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ 1 ಗಂಟೆಯ ಶೈಕ್ಷಣಿಕ ಹಾಗೂ ಮಾನಸಿಕ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ.
ವಿಷಯಗಳು: ಪರೀಕ್ಷಾ ಭಯ ನಿವಾರಣೆ, ಸಮಯ ನಿರ್ವಹಣೆ (Time Management), ಒತ್ತಡ ನಿರ್ವಹಣೆ (Stress Management), ವೈಜ್ಞಾನಿಕ ಅಧ್ಯಯನ ಕ್ರಮಗಳು ಹಾಗೂ ಪರೀಕ್ಷೆಗೆ ಸೂಕ್ತವಾಗಿ ಸಿದ್ಧರಾಗುವ ವಿಧಾನಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಮಾರ್ಕ್ಸ್ ಗಿಂತ ಜ್ಞಾನಕ್ಕೆ ಒತ್ತು: ಕೇವಲ ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲ, ಯೋಜನೆ ಮತ್ತು ಪ್ರಾಯೋಗಿಕ ವಿಧಾನಗಳ ಮೂಲಕ ಒತ್ತಡವನ್ನು ಜಯಿಸುವುದು ಹೇಗೆ ಎಂಬುದನ್ನು ತಮ್ಮದೇ ವಯಸ್ಸಿನ ಸಹಪಾಠಿಗಳಿಗೆ ಸರಳವಾಗಿ ವಿವರಿಸಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ 1ರಿಂದ ಸಬ್ಸಿಡಿ LPGಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ಗ್ರಾಹಕರಿಗೆ ಮಹತ್ವದ ಸೂಚನೆ
6ನೇ ತರಗತಿಯಿಂದಲೇ ಸೈಕಾಲಜಿಯಲ್ಲಿ ಆಸಕ್ತಿ!:
ವಿಷ್ಣುಪ್ರಿಯಾಗೆ 6ನೇ ತರಗತಿಯಲ್ಲಿದ್ದಾಗಲೇ ಮಾನಸಿಕ ಆರೋಗ್ಯ ಹಾಗೂ ಕೌನ್ಸೆಲಿಂಗ್ ವಿಷಯಗಳಲ್ಲಿ ತೀವ್ರ ಆಸಕ್ತಿ ಮೂಡಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ‘ಇಂಡಿಯನ್ ಕೌನ್ಸೆಲಿಂಗ್ ಸರ್ವಿಸಸ್’ ಮೂಲಕ ಆನ್‌ಲೈನ್ ಕೋರ್ಸ್‌ಗಳನ್ನು ಪೂರೈಸಿ ಜ್ಞಾನ ಹೆಚ್ಚಿಸಿಕೊಂಡಿದ್ದಾಳೆ.
ತಾನು ಕಲಿತ ಸೈಕಾಲಜಿ ಮತ್ತು ಕೌನ್ಸೆಲಿಂಗ್ ಜ್ಞಾನವನ್ನು ತನ್ನ ಬಳಿಯಷ್ಟೇ ಇಟ್ಟುಕೊಳ್ಳದೆ, ಪರೀಕ್ಷಾ ಭಯದಿಂದ ಬಳಲುವ ಇತರ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂಬ ಉದಾತ್ತ ಚಿಂತನೆಯಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾಗಿ ವಿಷ್ಣುಪ್ರಿಯಾ ತಿಳಿಸಿದ್ದಾರೆ.
ಅಕ್ಟೋಬರ್ 1 ರಂದು ಅಧಿಕೃತ ವಿಶ್ವ ದಾಖಲೆ ಪ್ರಮಾಣಪತ್ರ ಪ್ರದಾನ:
ವಿಷ್ಣುಪ್ರಿಯಾ ಅವರ ಈ ಸಮಾಜಮುಖಿ ಹಾಗೂ ಸಾಹಸಮಯ ಯತ್ನವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯು ಹತ್ತಿರದಿಂದ ವೀಕ್ಷಿಸಿ ವಿಶ್ವ ದಾಖಲೆಯಾಗಿ ಗುರುತಿಸಿದೆ.
ಬರುವ ಅಕ್ಟೋಬರ್ 1 ರಂದು ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಉಪಸ್ಥಿತಿಯಲ್ಲಿ ವಿಶ್ವ ದಾಖಲೆಯ ಅಧಿಕೃತ ಪ್ರಮಾಣಪತ್ರವನ್ನು ವಿಷ್ಣುಪ್ರಿಯಾಗೆ ಹಸ್ತಾಂತರಿಸಲಾಗುವುದು.
ಶಾಲೆಗೆ ಹೋಗುವ ವಯಸ್ಸಿನಲ್ಲೇ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದ ವಿಷ್ಣುಪ್ರಿಯಾ ಅವರ ಈ ಅಪರೂಪದ ಸಾಧನೆಗೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

