Breaking News

ಲೇಸ್, ಮ್ಯಾಗಿ, ಕುರ್ಕುರೆ ದಿನಾಂಕ ತಿದ್ದುಪಡಿ ದಂಧೆ ಬಯಲಿಗೆ: ಎಫ್‌ಡಿಎ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಖದೀಮರು

ಮುಂಬೈ: ಆಹಾರದ ಪ್ಯಾಕೆಟ್‌ಗಳ ಮೇಲಿದ್ದ ಅವಧಿ ಮುಕ್ತಾಯ ದಿನಾಂಕಗಳನ್ನು (Expiry Dates) ಅಳಿಸಿ, ಹೊಸ ದಿನಾಂಕಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ದಂಧೆಯೊಂದನ್ನು ನವಿ ಮುಂಬೈನ ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ಅಪರಾಧ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದ್ದಾರೆ. ದಾಳಿ ವೇಳೆ ಬರೋಬ್ಬರಿ 5.75 ಕೋಟಿ ಮೌಲ್ಯದ 4,142 ಕಾರ್ಟನ್‌ ಆಹಾರ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ.

ಟರ್ಭೆಯ ಟಿಟಿಸಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ‘ಸಾಧನಾ ಎಂಟರ್‌ಪ್ರೈಸಸ್’ ಮೇಲೆ ಈ ಹಠಾತ್ ದಾಳಿ ನಡೆಸಲಾಗಿದೆ. ಕಂಪನಿಯ ಗೋದಾಮಿನಲ್ಲಿ ತಯಾರಿಕಾ ದಿನಾಂಕ, ಎಕ್ಸ್‌ಪೈರಿ ಡೇಟ್ ಹಾಗೂ ಬಳಕೆ ಮುಕ್ತಾಯದ ಅವಧಿಗಳನ್ನು ತಿದ್ದುಪಡಿ ಮಾಡುತ್ತಿರುವುದು ಕಂಡುಬಂದಿದೆ. ಜೊತೆಗೆ ಪದಾರ್ಥಗಳ ಘಟಕಾಂಶಗಳು ಹಾಗೂ ಪೌಷ್ಟಿಕಾಂಶದ ವಿವರಗಳಿದ್ದ ಹೊಸ ಸ್ಟಿಕ್ಕರ್‌ಗಳನ್ನು ಅಂಟಿಸಿ ಹಳೆಯ ದಾಸ್ತಾನನ್ನು ಹೊಸದಾಗಿ ಬಿಂಬಿಸಲಾಗುತ್ತಿತ್ತು.

ಜಪ್ತಿ ಮಾಡಲಾದ ಸರಕುಗಳಲ್ಲಿ ಲೇಸ್ (Lays), ಕುರ್ಕುರೆ (Kurkure), ಬಿಂಗೊ (Bingo), ಫನ್ ಫ್ಲಿಪ್ಸ್ (Fun Flips), ಮ್ಯಾಗಿ (Maggi), ರಸೋಯಿ (Rasoi), ನಾರ್ (Knorr), ಹೆಲ್‌ಮ್ಯಾನ್ಸ್ (Hellmann’s), ಥಮ್ಸ್ ಅಪ್ (Thums Up) ಮತ್ತು ಲಿಮ್ಕಾ (Limca) ಸೇರಿದಂತೆ ೧೦ ಪ್ರಸಿದ್ಧ ಕಂಪನಿಗಳ ಉತ್ಪನ್ನಗಳು ಸೇರಿವೆ.

ಇದರ ಜೊತೆಗೆ ಲೇಬಲ್ ಇಲ್ಲದ ₹೩೦,೬೦೦ ಮೌಲ್ಯದ ಅವಧಿ ಮೀರಿದ ಇತರೆ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲ ಕಂಪನಿಗಳ ಪ್ಯಾಕೇಜಿಂಗ್ ಅನ್ನು ನಕಲು ಮಾಡಲು ಯತ್ನಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಎವರೆಸ್ಟ್‌, ಲಾಲ್ಜಿ ಗೋಧೂ ಹಿಂಗುಗಳ ಮಾರಾಟಕ್ಕೆ FSSAI ತಾತ್ಕಾಲಿಕ ನಿಷೇಧ

ಕಾನೂನು ಕ್ರಮ:

ಈ ಅಕ್ರಮ ಜಾಲದ ವಿರುದ್ಧ ಟರ್ಭೆ ಪೊಲೀಸ್ ಠಾಣೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 (FSSAI Act, 2006) ಹಾಗೂ ಭಾರತೀಯ ನ್ಯಾಯ ಸಂಹಿತೆ-2023 (BNS, 2023) ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ. ಅಲ್ಲದೆ, ನಿಯಮ ಉಲ್ಲಂಘಿಸಿದ ‘ಸಾಧನಾ ಎಂಟರ್‌ಪ್ರೈಸಸ್’ ಸಂಸ್ಥೆಯ ಆಹಾರ ಪರವಾನಗಿಯನ್ನು (Food Licence) ಅಮಾನತುಗೊಳಿಸುವ ಪ್ರಕ್ರಿಯೆಯನ್ನು ಎಫ್‌ಡಿಎ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *