ಬೆಂಗಳೂರು: ರಾಜ್ಯ ಸರ್ಕಾರದ ಸಾರಿಗೆ ರಂಗದಲ್ಲಿ ಡಿಜಿಟಲ್ ಕ್ರಾಂತಿಗೆ ಹೊಸ ಚಾಲನೆ ಸಿಕ್ಕಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ (RTCs) ಸೇವೆಗಳನ್ನು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ತರುವ ‘ಒನ್ ಕರ್ನಾಟಕ ಮೊಬಿಲಿಟಿ’ (One Karnataka Mobility App) ಆ್ಯಪ್ ಅನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಇದರೊಂದಿಗೆ ಕೆಎಸ್‌ಆರ್‌ಟಿಸಿ (KSRTC), ವಾಯುವ್ಯ ಸಾರಿಗೆ (NWKRTC) ಹಾಗೂ ಕಲ್ಯಾಣ ಕರ್ನಾಟಕ (KKRTC) ಬಸ್‌ಗಳಿಗೆ ವಾಟ್ಸಾಪ್ (WhatsApp) ಮೂಲಕ ಟಿಕೆಟ್ ಬುಕ್ ಮಾಡುವ ಹಾಗೂ ರದ್ದುಗೊಳಿಸುವ ಹೈಟೆಕ್ ಸೌಲಭ್ಯಕ್ಕೂ ಅಧಿಕೃತ ಚಾಲನೆ ಸಿಕ್ಕಿದೆ.
ವಿಧಾನಸೌಧದಲ್ಲಿ ನಡೆದ ಸರ್ಕಾರದ 100 ದಿನಗಳ ಸಾಧನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಿಷ್ಕೃತ KSRTC AWATAR 2.0 ಮೊಬೈಲ್ ಆ್ಯಪ್ ಮತ್ತು ವಾಟ್ಸಾಪ್ ಟಿಕೆಟಿಂಗ್ ವ್ಯವಸ್ಥೆಯನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದರು. ಪ್ರಯಾಣಿಕರು ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್‌ಗಳನ್ನು ಒಂದೇ ಆ್ಯಪ್‌ನಲ್ಲಿ ಬುಕ್ ಮಾಡಬಹುದು ಮತ್ತು ಹಳೆಯ ಬುಕಿಂಗ್ ವಿವರಗಳನ್ನು ಸುಲಭವಾಗಿ ವೀಕ್ಷಿಸಬಹುದು.
ಸಾರಿಗೆ ಸಂಸ್ಥೆಗಳ ಸೇವೆಗೆ ಸಂಬಂಧಿಸಿದ ದೂರುಗಳನ್ನು ಈ ಆ್ಯಪ್ ಮೂಲಕವೇ ಸಲ್ಲಿಸಬಹುದು. ಅಷ್ಟೇ ಅಲ್ಲದೆ, ದೂರಿನ ಪ್ರಗತಿಯನ್ನು (Status Track) ಪರಿಶೀಲಿಸಲು ಮತ್ತು ಸಮಸ್ಯೆ ಬಗೆಹರಿಯುವವರೆಗೆ ಅದನ್ನು ಮೇಲ್ಮಟ್ಟದ ಅಧಿಕಾರಿಗಳಿಗೆ ರವಾನಿಸಲು (Escalate) ಅವಕಾಶ ಕಲ್ಪಿಸಲಾಗಿದೆ. ಹಂತ-ಹಂತವಾಗಿ ಡಿಜಿಟಲ್ ಬಸ್ ಪಾಸ್ ಸೌಲಭ್ಯವನ್ನು ಪರಿಚಯಿಸಲಾಗುತ್ತಿದ್ದು, ಪ್ರಯಾಣಿಕರು ಆನ್‌ಲೈನ್‌ನಲ್ಲೇ ಪಾಸ್ ಪಡೆದು ಕ್ಯೂಆರ್ ಕೋಡ್ (QR Code) ಆಧಾರಿತ ಪರಿಶೀಲನೆಯ ಮೂಲಕ ಪ್ರಯಾಣಿಸಬಹುದು.
ವಾಟ್ಸಾಪ್ ಮೂಲಕ ಟಿಕೆಟ್ ಬುಕಿಂಗ್ ಹೇಗೆ?
ಈಗ ಪ್ರಯಾಣಿಕರು ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳದೇ ನೇರವಾಗಿ ವಾಟ್ಸಾಪ್ ಮೂಲಕ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳ ಟಿಕೆಟ್ ಬುಕ್ ಮಾಡಬಹುದು. ನಿಮ್ಮ ಮೊಬೈಲ್‌ನಲ್ಲಿ +91 6364940880 ಸಂಖ್ಯೆಯನ್ನು ಸೇವ್ ಮಾಡಿಕೊಂಡು, ‘Hi’ ಎಂದು ಸಂದೇಶ ಕಳುಹಿಸಬೇಕು. ವಾಟ್ಸಾಪ್ ಬೋಟ್ ನೀಡುವ ಮಾರ್ಗದರ್ಶನದಂತೆ ಪ್ರಯಾಣದ ವಿವರಗಳನ್ನು ನಮೂದಿಸಿ ಟಿಕೆಟ್ ಬುಕ್ ಮಾಡಬಹುದು.ಇದೇ ವಾಟ್ಸಾಪ್ ಸಂಖ್ಯೆಯಲ್ಲಿ ‘Ticket Cancellation’ ಆಯ್ಕೆ ಮಾಡಿಕೊಂಡು, ಬುಕಿಂಗ್ ವೇಳೆ ಬಂದಿದ್ದ PNR ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ನೀಡಿ ಟಿಕೆಟ್ ರದ್ದುಗೊಳಿಸಬಹುದು. ರಾಜ್ಯ ಸರ್ಕಾರದ ಈ ತಾಂತ್ರಿಕ ಉಪಕ್ರಮವು ದಿನನಿತ್ಯ ಹಾಗೂ ಸುದೀರ್ಘ ಪ್ರಯಾಣ ಬೆಳೆಸುವ ಲಕ್ಷಾಂತರ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾಗಲಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

