Breaking News

ಬಲೂಚಿಸ್ತಾನ ಪ್ರಾಂತ್ಯದ ಮೇಲೆ ಪಾಕ್‌ ಸೇನೆಯಿಂದ ದಾಳಿ; 177 ಉಗ್ರರ ಸಾವು

Pakistan army attacks Balochistan province; 177 terrorists killed

ಪಾಕಿಸ್ತಾನದ ದಕ್ಷಿಣ ಪಶ್ಚಿಮ ಭಾಗದಲ್ಲಿರುವ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಫೆಬ್ರವರಿ ತಿಂಗಳ ಮೊದಲ ದಿನದ ಒಂದು ರಾತ್ರಿಯಲ್ಲಿ ಸುಮಾರು ಎರಡು ಡಜನ್ ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ ಮೃತಪಟ್ಟ ಉಗ್ರರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಶನಿವಾರದಿಂದಲೇ ಪೊಲೀಸ್ ಮತ್ತು ಸೇನೆಯ ಬೆಂಬಲದೊಂದಿಗೆ ಕಾರ್ಯಾಚರಣೆಗಳು ನಡೆಯುತ್ತಿವೆ. ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಸಂಘಟನೆಯ ಸದಸ್ಯರ ವಿರುದ್ಧ ಈ ದಾಳಿ ನಡೆಸಲಾಗುತ್ತಿದೆ.

Advertisement

ಶನಿವಾರ ಸುಮಾರು 200 ಉಗ್ರರು ಸಣ್ಣ ಸಣ್ಣ ಗುಂಪುಗಳಾಗಿ ವಿಭಜನೆಗೊಂಡು ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಆತ್ಮಾಹುತಿ ದಾಳಿ ಹಾಗೂ ಗುಂಡಿನ ದಾಳಿಗಳನ್ನು ನಡೆಸಿದ್ದರು. ಪೊಲೀಸ್ ಠಾಣೆಗಳು, ನಾಗರಿಕರ ಮನೆಗಳು ಮತ್ತು ಭದ್ರತಾ ಕೇಂದ್ರಗಳು ಈ ದಾಳಿಗಳ ಗುರಿಯಾಗಿದ್ದವು.

ವಿಶ್ಲೇಷಕರ ಪ್ರಕಾರ, ಕಳೆದ ಹಲವು ದಶಕಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಉಗ್ರರ ಸಾವು 48 ಗಂಟೆಗಳಲ್ಲಿ ಸಂಭವಿಸಿರುವುದು ಇದೇ ಮೊಟ್ಟಮೊದಲ ಬಾರಿ.

ಇದನ್ನೂ ಓದಿ: ಒಂದೇ ಒಂದು ದಾಳಿಯಾದರು ಯುದ್ದವೆಂದು ಪರಿಗಣಿಸುತ್ತೇವೆ: ಇರಾನ್ ತಿರುಗೇಟು

ಈ ವಾರಾಂತ್ಯ ನಡೆದ ದಾಳಿಗಳ ಹೊಣೆಗಾರಿಕೆಯನ್ನು ಬಲೂಚ್ ಲಿಬರೇಷನ್ ಆರ್ಮಿ ಸ್ವೀಕರಿಸಿದ್ದು, ಈ ದಾಳಿಗಳಲ್ಲಿ ಕನಿಷ್ಠ 18 ನಾಗರಿಕರು ಹಾಗೂ 15 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರಕ್ಕೆ ಪಾಕಿಸ್ತಾನದ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಜೈಲಿನಲ್ಲಿ ಬಂಧಿತರಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ನಾಯಕರು ಕೂಡ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಭಾರತದ ಹೆಸರು ಎಳೆದು ತಂದ ಪಾಕ್‌ ಗೃಹಸಚಿವ

ಈ ನಡುವೆ, ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಸೋಮವಾರ ನೀಡಿದ ಹೇಳಿಕೆಯಲ್ಲಿ, ಮತ್ತಷ್ಟು 22 ಉಗ್ರರನ್ನು ಹೊಡೆದುರುಳಿಸಿದಕ್ಕಾಗಿ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ. ಮೃತಪಟ್ಟ ಉಗ್ರರನ್ನು ‘ಭಾರತ ಬೆಂಬಲಿತ ಉಗ್ರರು’ ಎಂದು ಅವರು ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಯಾವುದೇ ಸಾಕ್ಷ್ಯ ಒದಗಿಸಲಿಲ್ಲ. ಈ ಕುರಿತಂತೆ ನವದೆಹಲಿಯಿಂದಲೂ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

ಗಮನಾರ್ಹವಾಗಿ, ಬಲೂಚಿಸ್ತಾನ ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯವಾಗಿದ್ದರೂ ಜನಸಂಖ್ಯೆ ಅತಿ ಕಡಿಮೆ. ಈ ಪ್ರದೇಶವು ಎತ್ತರದ ಪರ್ವತಗಳಿಂದ ಕೂಡಿದ್ದು, ಬಹುಪಾಲು ಬಲೂಚ್ ಜನಾಂಗದವರು ಇಲ್ಲಿ ವಾಸಿಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ತಮಗೆ ಅನ್ಯಾಯ ಮತ್ತು ಶೋಷಣೆ ಆಗುತ್ತಿದೆ ಎಂಬ ಆರೋಪಗಳು ಇಲ್ಲಿನ ಪ್ರತ್ಯೇಕತಾವಾದಿ ಚಳವಳಿಗೆ ಇಂಧನ ಒದಗಿಸಿವೆ. ಇದರ ಜೊತೆಗೆ ಇಸ್ಲಾಮಿಕ್ ಉಗ್ರ ಸಂಘಟನೆಗಳೂ ಇಲ್ಲಿ ಸಕ್ರಿಯವಾಗಿವೆ.

ಇದನ್ನೂ ಓದಿ: ಭಾರತದ ಸರಕುಗಳ ಮೇಲೆ ವಿಧಿಸಿದ್ದ ಸುಂಕ ಕಡಿತಗೊಳಿಸಿದ ಟ್ರಂಪ್‌, ಮೋದಿ ಹೇಳಿದ್ದೇನು?

ಸೋಮವಾರದ ವೇಳೆಗೆ ಪ್ರಾಂತ್ಯದಲ್ಲಿ ಬಹುತೇಕ ಸಾಮಾನ್ಯ ಸ್ಥಿತಿ ಮರಳಿದರೂ, ಬಲೂಚಿಸ್ತಾನ ಮತ್ತು ಪಾಕಿಸ್ತಾನದ ಇತರ ಭಾಗಗಳ ನಡುವಿನ ರೈಲು ಸಂಚಾರ ಮೂರನೇ ದಿನವೂ ಸ್ಥಗಿತಗೊಂಡಿದೆ. ಭದ್ರತಾ ಕಾರಣಗಳಿಂದ ಪ್ರಾಂತ್ಯ ಸರ್ಕಾರ ರೈಲು ಸೇವೆಗಳನ್ನು ರದ್ದುಪಡಿಸಿದ್ದು, ಈ ನಿರ್ಧಾರ ಇನ್ನೂ ಮುಂದುವರಿದಿದೆ.

ಇನ್ನು ಮಾರ್ಚ್ ತಿಂಗಳಲ್ಲಿ ನಡೆದ ಮತ್ತೊಂದು ಭೀಕರ ಘಟನೆಯಲ್ಲಿ, ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಬಲೂಚ್ ಲಿಬರೇಷನ್ ಆರ್ಮಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದರು. ಪ್ರಯಾಣಿಕರನ್ನು ಬಂಧಕವಾಗಿಟ್ಟುಕೊಂಡ ಬಳಿಕ ಭದ್ರತಾ ಪಡೆಗಳು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲಾ 33 ಉಗ್ರರನ್ನು ಹತ್ಯೆ ಮಾಡಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿತ್ತು.

ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಸಂಘಟನೆ ಇತ್ತೀಚಿನ ವರ್ಷಗಳಲ್ಲಿ ಹಲವು ದಾಳಿಗಳನ್ನು ನಡೆಸಿದ್ದು, ವಿಶೇಷವಾಗಿ ಭದ್ರತಾ ಪಡೆಗಳು, ಚೀನಾದ ಹಿತಾಸಕ್ತಿಗಳು ಮತ್ತು ಮೂಲಸೌಕರ್ಯ ಯೋಜನೆಗಳನ್ನು ಗುರಿಯಾಗಿಸಿಕೊಂಡಿದೆ. ಈ ಸಂಘಟನೆಗೆ ಪಾಕಿಸ್ತಾನ ತಾಲಿಬಾನ್ — ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ — ಸಂಘಟನೆಯ ಬೆಂಬಲವಿದ್ದು, ಅವರು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದೊಂದಿಗೆ ಮೈತ್ರಿ ಹೊಂದಿದ್ದಾರೆ ಎಂದು ಪಾಕಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು