ಬೆಂಗಳೂರು: ನಟ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ನೀಡಿದ ವಿವಾದಾತ್ಮಕ ಹೇಳಿಕೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲ ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ ಎಂಬ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಗಿದ್ದು, ಕನ್ನಡ ಸಿನಿಮಾ ನಿರ್ಮಾಪಕರ ಸಂಘ ಈ ಕುರಿತು ಕಾನೂನು ಹೋರಾಟಕ್ಕೆ ಮುಂದಾಗಿದೆ.
ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡುವ ವೇಳೆ ನೀಡಿದ ಈ ಹೇಳಿಕೆಯಿಂದ ಆಕ್ರೋಶಗೊಂಡಿರುವ ನಿರ್ಮಾಪಕರ ಸಂಘ, ತುರ್ತು ಸಭೆ ನಡೆಸಿ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ದಾಖಲಿಸುವ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

ನಿರ್ಮಾಪಕರ ಸಂಘದ ಪ್ರಕಾರ, ಈ ರೀತಿಯ ಅಸಂಬದ್ಧ ಹೇಳಿಕೆಗಳು ಕನ್ನಡ ಚಿತ್ರರಂಗದ ಬಗ್ಗೆ ತಪ್ಪು ಸಂದೇಶ ನೀಡುತ್ತಿವೆ. ಇದರಿಂದ ಗೊಂದಲ ಹಾಗೂ ಆತಂಕ ಸೃಷ್ಟಿಯಾಗುತ್ತಿದೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
“ಚಕ್ರವರ್ತಿ ಚಂದ್ರಚೂಡ್ ಅವರು ನೀಡಿರುವ ಹೇಳಿಕೆ ಅತ್ಯಂತ ಅವಹೇಳನಕಾರಿ. ಇಡೀ ನಿರ್ಮಾಪಕ ಸಮುದಾಯದ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳಿವು. ಇದನ್ನು ನಾವು ಸಹಿಸುವ ಪ್ರಶ್ನೆಯೇ ಇಲ್ಲ. ಅದಕ್ಕಾಗಿ ಪೊಲೀಸ್ ದೂರು ದಾಖಲಿಸಿದ್ದೇವೆ” ಎಂದಿದೆ.

ಇದನ್ನೂ ಓದಿ: Dhurandhar: ಧುರಂಧರ್ ಸಿನಿಮಾ ವೀಕ್ಷಣೆಯಲ್ಲಿ ಪಾಕಿಸ್ತಾನ ನಂ.1!
ಇನ್ನು ಈ ವಿವಾದದ ಕುರಿತು ಚಕ್ರವರ್ತಿ ಚಂದ್ರಚೂಡ್ ತಮ್ಮ ಸ್ಪಷ್ಟನೆ ನೀಡಿದ್ದಾರೆ. “ನಾನು ಮಾತನಾಡಿದ್ದು ಕನ್ನಡ ನಿರ್ಮಾಪಕರ ಬಗ್ಗೆ ಅಲ್ಲವೇ ಅಲ್ಲ. ತಮಿಳು ಚಿತ್ರರಂಗದ ವಾತಾವರಣ ಮತ್ತು ಅಲ್ಲಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತ್ರ ಮಾತನಾಡಿದ್ದೇನೆ. ‘ಕಮೋಡ್ ಟು ಕಾಂಡೋಮ್’ ಎಂಬುದು ಕೇವಲ ಒಂದು ಉಪಮೆ. ಯಾವುದೇ ನಿರ್ಮಾಪಕರನ್ನು ಗುರಿಯಾಗಿಸಿಕೊಂಡು ನಾನು ಹೇಳಿಕೆ ನೀಡಿಲ್ಲ” ಎಂದಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವದಿಂದ, ಅಲ್ಲಿನ ನಾಯಕ ಕೇಂದ್ರೀತ ವ್ಯವಸ್ಥೆ ಮತ್ತು ಅದರ ಪರಿಣಾಮಗಳನ್ನು ವಿವರಿಸಿದ್ದೇನೆ ಎಂದು ಚಂದ್ರಚೂಡ್ ಹೇಳಿದ್ದಾರೆ. ಆದರೆ ವಿಡಿಯೋದ ಒಂದು ಭಾಗವನ್ನು ಮಾತ್ರ ಕತ್ತರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಡಿಯೋದ ಸಂಪೂರ್ಣ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದೇ ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ನಿರ್ಮಾಪಕರು ಇದರಿಂದ ನೊಂದಿಕೊಳ್ಳುವ ಅಗತ್ಯವಿಲ್ಲ” ಎಂದಿದ್ದಾರೆ.
ಒಟ್ಟಿನಲ್ಲಿ, ಚಕ್ರವರ್ತಿ ಚಂದ್ರಚೂಡ್ ಹೇಳಿಕೆ ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಈ ವಿಚಾರ ಈಗ ಕಾನೂನು ಹಂತಕ್ಕೆ ತಲುಪಿದೆ. ಮುಂದಿನ ಬೆಳವಣಿಗೆಗಳತ್ತ ಚಿತ್ರರಂಗದ ಗಮನ ಕೇಂದ್ರೀಕೃತವಾಗಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

