ನವದೆಹಲಿ: ಕೇಂದ್ರ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಆರ್ಥಿಕ ನೆರವು ಪಡೆಯಲು ಮತದಾರರ ಗುರುತಿನ ಚೀಟಿ ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಕೇಂದ್ರದ ಈ ಹೊಸ ಪ್ರಸ್ತಾವನೆಯು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಕೋಟ್ಯಂತರ ಅರ್ಹ ಫಲಾನುಭವಿಗಳನ್ನು ಸರ್ಕಾರಿ ಯೋಜನೆಗಳಿಂದ ಸಂಪೂರ್ಣವಾಗಿ ಹೊರಗಿಡಲಿದೆ ಎಂದು ಸಿಪಿಐ(ಎಂ) (CPI-M) ತೀವ್ರ ಕಳವಳ ವ್ಯಕ್ತಪಡಿಸಿದ್ದು, ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದೆ.
ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಪ್ರಸ್ತಾವನೆಯ ಕುರಿತು ಮಾತನಾಡಿ, “ಇನ್ಮುಂದೆ ಫಲಾನುಭವಿಗಳ ಗುರುತು ಪತ್ತೆ ಹಾಗೂ ನೆರವು ಹಣ ಪಾವತಿಗೆ ಮತದಾರರ ಗುರುತಿನ ಚೀಟಿ (EPIC) ಸಂಖ್ಯೆಯ ಜೊತೆಗೆ ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸುವುದು ಅಗತ್ಯವಾಗಲಿದೆ” ಎಂದು ತಿಳಿಸಿದ್ದಾರೆ. ಇದೇ ವೇಳೆ ಆಧಾರ್ (Aadhaar) ಕಾರ್ಡ್‌ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಸಚಿವರು, “ಸದ್ಯ ಆಧಾರ್ ಕಾರ್ಡ್‌ಗಳನ್ನು ಅತ್ಯಂತ ಸುಲಭವಾಗಿ ಮತ್ತು ಕೆಲವೇ ನಿಮಿಷಗಳಲ್ಲಿ ನೋಂದಣಿ ಕೇಂದ್ರಗಳ ಮೂಲಕ ಪಡೆಯಬಹುದಾಗಿದೆ, ಹೀಗಾಗಿ ಫಲಾನುಭವಿಗಳ ನೈಜ ಗುರುತಿಸುವಿಕೆಗೆ ಮತದಾರರ ಐಡಿ ಹೆಚ್ಚು ಸೂಕ್ತ” ಎಂದು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಪಂಚಾಯತ್ ರಾಜ್ ಸಚಿವಾಲಯವು ನೇರವಾಗಿ ಯಾವುದೇ ಫಲಾನುಭವಿಗಳಿಗೆ ಹಣ ರವಾನಿಸುವ ಯೋಜನೆಗಳನ್ನು ನಿರ್ವಹಿಸದೇ ಇರುವುದರಿಂದ ಮತ್ತು ಯಾವ ನಿರ್ದಿಷ್ಟ ಯೋಜನೆಗಳಿಗೆ ಇದು ಅನ್ವಯಿಸಲಿದೆ ಎಂಬುದನ್ನು ಸಚಿವರು ಸ್ಪಷ್ಟಪಡಿಸದೇ ಇರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.
ಬಯೋಮೆಟ್ರಿಕ್ & ವೋಟರ್ ಐಡಿ ಕಡ್ಡಾಯಕ್ಕೆ ಸಿಪಿಐ(ಎಂ) ತೀವ್ರ ಆಕ್ರೋಶ:
ಕೇಂದ್ರ ಸರ್ಕಾರದ ಈ ನಡೆಯನ್ನು ಸಿಪಿಐ(ಎಂ) ಪೋಲಿಟ್ ಬ್ಯುಸೋ ತೀವ್ರವಾಗಿ ಖಂಡಿಸಿದ್ದು, ಕೆಳಗಿನ ಪ್ರಮುಖ ಅಂಶಗಳನ್ನು ಎತ್ತಿಹಿಡಿದಿದೆ: ಕಣ್ಣಿನ ಪಾಪೆಯ ಗುರುತು ಸಿಗದ ವೃದ್ಧ ಕೃಷಿ ಕಾರ್ಮಿಕ ಮಹಿಳೆಯರು ಹಾಗೂ ಬೆರಳಚ್ಚು ತೆಯ್ದುಹೋಗಿ ದೃಢೀಕರಣಗೊಳ್ಳದ ಕೂಲಿ ಕಾರ್ಮಿಕರು ಈಗಾಗಲೇ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದ ಸೌಲಭ್ಯ ವಂಚಿತರಾಗುತ್ತಿದ್ದಾರೆ. ಸ್ಮಾರ್ಟ್‌ಫೋನ್ ಇಲ್ಲದ ಗ್ರಾಮೀಣ ಕುಟುಂಬಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸುವುದು ಬಡವರಿಗೆ ಮಾಡುವ ಅನ್ಯಾಯ ಎಂದು ಪಾರ್ಟಿ ಹೇಳಿದೆ.

ಪ್ರಸ್ತುತ ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ 13.4 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಇದರಲ್ಲಿ ಅಲ್ಪಸಂಖ್ಯಾತರು, ಮಹಿಳೆಯರು, ಶೋಷಿತ ಸಮುದಾಯಗಳು ಹಾಗೂ ಬಡವರು ಹೆಚ್ಚಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಭಾರಿ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರು ರದ್ದಾದ ಕಾರಣಕ್ಕೆ ಕೆಲವು ರಾಜ್ಯ ಸರ್ಕಾರಗಳು ಉಚಿತ ಅಕ್ಕಿ/ರೇಷನ್ ಹಾಗೂ ಪಿಂಚಣಿ ಸೌಲಭ್ಯಗಳನ್ನು ತಡೆಹಿಡಿಯುತ್ತಿವೆ. ವೋಟರ್ ಐಡಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ನಿರಾಕರಿಸುವುದು ಕಾನೂನುಬಾಹಿರ ಎಂದು ಸಿಪಿಐ(ಎಂ) ಎಚ್ಚರಿಸಿದೆ. “ಆಧಾರ್ ಕಡ್ಡಾಯವಲ್ಲ ಎಂದು ಹಿಂದೆ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಬಳಿಕ ಪಿಎಂ-ಕಿಸಾನ್, ಉದ್ಯೋಗ ಖಾತ್ರಿ, ಉಚಿತ ವಸತಿ ಹಾಗೂ ಪಿಂಚಣಿ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿತು. ಈಗ ತಾನೇ ಆಧಾರ್ ಅನ್ನು ಪಕ್ಕಕ್ಕಿಟ್ಟು ಹೊಸ ವೋಟರ್ ಐಡಿ ನಿಯಮ ತರುತ್ತಿರುವುದು ಸರ್ಕಾರದ ಗೊಂದಲದ ನೀತಿಯನ್ನು ತೋರಿಸುತ್ತದೆ” ಎಂದು ಸಿಪಿಐ(ಎಂ) ವ್ಯಂಗ್ಯವಾಡಿದೆ.
ಕಲ್ಯಾಣ ಯೋಜನೆಗಳ ಲಾಭ ಪಡೆಯಲು ಯಾವುದೇ ತಂತ್ರಜ್ಞಾನ, ದಾಖಲೆ ಅಥವಾ ಸ್ಮಾರ್ಟ್‌ಫೋನ್‌ಗಳ ಕಟ್ಟುಪಾಡು ಇರಬಾರದು; ಸೌಲಭ್ಯಗಳು ಎಲ್ಲರಿಗೂ ಸಾರ್ವತ್ರಿಕವಾಗಿ ಸಿಗಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

