ಗ್ಯಾರಂಟಿ ಹೆಸರಿನಲ್ಲಿ ಮಧ್ಯಮ ವರ್ಗದ ಜೇಬಿನಿಂದ ತಿಂಗಳಿಗೆ 3,700 ರೂ. ಲೂಟಿ: ರಾಜ್ಯ ಸರ್ಕಾರದ ವಿರುದ್ಧ ಕಿಶೋರ್ ಕುಮಾರ್ ಪುತ್ತೂರು ವಾಗ್ದಾಳಿ

ಮಂಗಳೂರು: ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಂದ ಬರೋಬ್ಬರಿ 30 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಸುಲಿಗೆ ಮಾಡಿದೆ. ಗ್ಯಾರಂಟಿಗೆ 52 ಸಾವಿರ ಕೋಟಿ ರೂಪಾಯಿ ಇಟ್ಟಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರ, ಅದರ ಅರ್ಧಕ್ಕಿಂತ ಹೆಚ್ಚಿನ ಹಣವನ್ನು ಜನರ ಜೇಬಿಗೆ ಕತ್ತರಿ ಹಾಕಿ ಬೆಲೆ ಏರಿಕೆಯ ಮೂಲಕವೇ ವಸೂಲಿ ಮಾಡುತ್ತಿದೆ ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅಂಕಿಅಂಶಗಳ ಸಮೇತ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ಪಂಜೀರ ಗ್ರಾಮ ಪಂಚಾಯತ್ ಶಕ್ತಿ ಕೇಂದ್ರದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ “ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ – ನಮ್ಮ ಹಕ್ಕು ನಮಗೆ ನೀಡಿ” ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

Advertisement

ಸಭೆಯಲ್ಲಿ ಹಿರಿಯರಾದ ರಾಜಾರಾಂ ಭಟ್, ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೈತ್ತಬೈಲು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೋಟು, ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ್ ತೊಕ್ಕೊಟ್ಟು, ಕೆ. ಮೋಹನ್ ರಾಜ್ ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಬಜೆಟ್ ಏರಿಕೆ ಬರೋಬ್ಬರಿ 2 ಲಕ್ಷ ಕೋಟಿ, ಅಭಿವೃದ್ಧಿಗೆ ಮಾತ್ರ ಶೂನ್ಯ

Advertisement

ರಾಜ್ಯದ ಬಜೆಟ್ ಮತ್ತು ಅಭಿವೃದ್ಧಿ ಲೆಕ್ಕಾಚಾರವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ 2 ಲಕ್ಷದ 65 ಸಾವಿರ ಕೋಟಿ ರೂಪಾಯಿ ಇತ್ತು. 2023-24ರಲ್ಲಿ ಕಾಂಗ್ರೆಸ್ ಬಂದ ತಕ್ಷಣ ಅದು 3 ಲಕ್ಷದ 27 ಸಾವಿರ ಕೋಟಿ ಆಯಿತು. ಇನ್ನು ಪ್ರಸ್ತುತ ವರ್ಷದ ಬಜೆಟ್ ಬರೋಬ್ಬರಿ 4 ಲಕ್ಷದ 48 ಸಾವಿರ ಕೋಟಿ ರೂಪಾಯಿಗೆ ತಲುಪಿದೆ. ಅಂದರೆ ರಾಜ್ಯದ ಬಜೆಟ್‌ನಲ್ಲಿ ಸರಿಸುಮಾರು 2 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಆದರೆ ಈ ಬೃಹತ್ ಮೊತ್ತದಲ್ಲಿ ಅಭಿವೃದ್ಧಿಗೆಂದು ಇಟ್ಟ ಹಣ ಎಷ್ಟು ಗೊತ್ತಾ? ಕೇವಲ 71 ರಿಂದ 74 ಸಾವಿರ ಕೋಟಿ ರೂಪಾಯಿ ಮಾತ್ರ ಎಂದರು.

ಇದನ್ನೂ ಓದಿ: ಗ್ಯಾರಂಟಿ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಶೋರ್ ಕುಮಾರ್ ಪುತ್ತೂರು ವಾಗ್ದಾಳಿ

Advertisement

2022-23ರಲ್ಲೇ ಅಭಿವೃದ್ಧಿಗೆ 57 ಸಾವಿರ ಕೋಟಿ ರೂಪಾಯಿ ಇತ್ತು. ಬಜೆಟ್ ಗಾತ್ರ 4.5 ಲಕ್ಷ ಕೋಟಿಗೆ ಏರಿದರೂ ಹಳ್ಳಿಗಳ ಅಭಿವೃದ್ಧಿಗೆ ನಯಾಪೈಸೆ ಹಣವಿಲ್ಲದಂತಾಗಿದೆ ಎಂದು ಅಂಕಿಅಂಶಗಳನ್ನು ತೆರೆದಿಟ್ಟರು.

ಮಧ್ಯಮ ವರ್ಗಕ್ಕೆ ತಿಂಗಳಿಗೆ ₹3,700 ದಂಡ – ಗ್ಯಾರಂಟಿಯ ಅಸಲಿ ಬಣ್ಣ:

ಬಿಪಿಎಲ್ ಕಾರ್ಡ್‌ದಾರರನ್ನು ಹೊರತುಪಡಿಸಿ ನೋಡಿದರೆ, ಸರ್ಕಾರ ನೀಡುವ ಎಲ್ಲಾ ಗ್ಯಾರಂಟಿಗಳನ್ನು ಕಳೆದರೂ ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬವು ತನ್ನ ಜೇಬಿನಿಂದ ತಿಂಗಳಿಗೆ ಹೆಚ್ಚುವರಿಯಾಗಿ 3,700 ರೂಪಾಯಿ ಹಣವನ್ನು ಸರ್ಕಾರಕ್ಕೆ ಬೆಲೆ ಏರಿಕೆಯ ರೂಪದಲ್ಲಿ ಕಟ್ಟುವಂತಾಗಿದೆ. ಹಾಲು, ವಿದ್ಯುತ್, ಬಸ್ ಪ್ರಯಾಣ ದರ, ನೋಂದಣಿ ಶುಲ್ಕ ಎಲ್ಲವನ್ನೂ ಹೆಚ್ಚಿಸಿ ಬಡವರ, ಮಧ್ಯಮ ವರ್ಗದವರ ರಕ್ತ ಹೀರುತ್ತಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ಪಂಗಡದ 187 ಕೋಟಿ ರೂ. ಲೂಟಿ ಮಾಡಿದರು, ಮೂಡಾದಲ್ಲಿ ಸಾವಿರಾರು ಕೋಟಿ ಬೆಲೆಬಾಳುವ ಸೈಟುಗಳನ್ನು ನುಂಗಲು ಹೋಗಿ ಸಿಕ್ಕಿಬಿದ್ದರು, ಅಬಕಾರಿ ಇಲಾಖೆಯಲ್ಲಿ ಹಗರಣ ಮಾಡಿ ರಾಜ್ಯದ ಖಜಾನೆಯನ್ನು ಸಂಪೂರ್ಣ ಬರಿದು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪಂಚಾಯಿತಿಗಳು ದಿವಾಳಿ – ಕೇಂದ್ರದ ಮೋದಿ ಸರ್ಕಾರವೇ ಆಸರೆ

ಗ್ರಾಮ ಪಂಚಾಯಿತಿಗಳಿಗೆ ವರ್ಷಕ್ಕೆ ನೀಡುವ ಕೇವಲ ₹10 ಲಕ್ಷ ಅನುದಾನದಲ್ಲಿ ₹6 ಲಕ್ಷ ಕುಡಿಯುವ ನೀರಿನ ವಿದ್ಯುತ್ ಬಿಲ್ ಕಟ್ಟುವುದಕ್ಕೇ ಸರಿಯಾಗುತ್ತಿದ್ದು, ಉಳಿದ ₹4 ಲಕ್ಷ ಸಿಬ್ಬಂದಿ ವೇತನಕ್ಕೆ ಹೋಗುತ್ತಿದೆ. ಹಳ್ಳಿಗಳಲ್ಲಿ ರಸ್ತೆ, ಚರಂಡಿ ಕೆಲಸಕ್ಕೆ ರಾಜ್ಯ ಸರ್ಕಾರದಿಂದ ಬಿಡಿಕಾಸು ಅನುದಾನವಿಲ್ಲ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ 15ನೇ ಹಣಕಾಸು ಆಯೋಗ, ಸ್ವಚ್ಛ ಭಾರತ್ ಹಾಗೂ ಜಲಜೀವನ್ ಮಿಷನ್ ಅನುದಾನದಿಂದ ಮಾತ್ರ ಹಳ್ಳಿಗಳಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.

ಜಲಜೀವನ್ ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರ ₹24,000 ಕೋಟಿ ಮಂಜೂರು ಮಾಡಿದರೂ, ರಾಜ್ಯ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಮತ್ತು ಕಳಪೆ ಕಾಮಗಾರಿಯಿಂದಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ರಾಜ್ಯದ 43 ಇಲಾಖೆಗಳಲ್ಲಿ 2,88,430ಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿದ್ದರೂ ಭರ್ತಿ ಮಾಡದೆ ಯುವಜನತೆಗೆ ದ್ರೋಹ ಬಗೆಯಲಾಗಿದೆ ಎಂದು ಕಿಡಿಕಾರಿದರು.

ಈ ಜನವಿರೋಧಿ, ಭ್ರಷ್ಟ ಹಾಗೂ ದಿವಾಳಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಪಂಚಾಯತ್ ಮಟ್ಟದಿಂದಲೇ ನಮ್ಮ ಸಂಘಟಿತ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಶಾಸಕರು ಕರೆ ನೀಡಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ