ಕನ್ನಡ ನಾಡಗೀತೆಯಲ್ಲಿ ‘ಬೌದ್ಧ’ ಧರ್ಮದ ಹೆಸರು ಸೇರ್ಪಡೆಗೆ ಚಿಂತನೆ

ಬೆಂಗಳೂರು: ಕರ್ನಾಟಕದ ಜನಮನದಲ್ಲಿ ನೆಲೆಸಿರುವ ರಾಷ್ಟ್ರಕವಿ ಕುವೆಂಪು ಅವರ ಲೇಖನಿಯಿಂದ ಮೂಡಿಬಂದ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಐತಿಹಾಸಿಕ ಬದಲಾವಣೆಯೊಂದನ್ನು ತರಲು ಸರ್ಕಾರಿ ಮಟ್ಟದಲ್ಲಿ ಸಿದ್ಧತೆಗಳು ನಡೆದಿವೆ. ಸೌಹಾರ್ದತೆ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಮತ್ತಷ್ಟು ಎತ್ತಿಹಿಡಿಯುವ ನಿಟ್ಟಿನಲ್ಲಿ, ನಾಡಗೀತೆಯಲ್ಲಿ ಜೈನ ಧರ್ಮದ ಜೊತೆಗೆ ‘ಬೌದ್ಧ ಧರ್ಮ’ದ ಹೆಸರನ್ನೂ ಸೇರ್ಪಡೆಗೊಳಿಸಲು ಪ್ರಸ್ತಾಪಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿಯು ಈ ಮಹತ್ವದ ಸಲಹೆಯನ್ನು ನೀಡಿದ್ದು, ಸರ್ಕಾರದ ಮುಂದಿಟ್ಟಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ನಾಡಗೀತೆಯಲ್ಲಿ ಕರ್ನಾಟಕವನ್ನು ಧರ್ಮಗಳ ಸಮನ್ವಯತೆಯ ನಾಡು ಎಂದು ಬಣ್ಣಿಸುವಾಗ ಜೈನ ಧರ್ಮವನ್ನು ಉಲ್ಲೇಖಿಸಲಾಗಿದೆ.

“ಜನಕನ ತನುಜೆಯ ಜನ್ಮಭೂಮಿ, ಜೈನರ ಪೂಜ್ಯ ಉದ್ಯಾನ” ಪುರುಷೋತ್ತಮ ಬಿಳಿಮಲೆ ಸಮಿತಿಯ ಸಲಹೆಯ ಪ್ರಕಾರ, ಈ ಸಾಲನ್ನು ಇನ್ನು ಮುಂದೆ “ಜೈನ ಬೌದ್ಧರ ಪೂಜ್ಯ ಉದ್ಯಾನ” ಎಂದು ಮಾರ್ಪಾಡು ಮಾಡಲು ಚಿಂತನೆ ನಡೆಸಲಾಗಿದೆ.

ಇದನ್ನೂ ಓದಿ: ಕೋಟಿ ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಬಂಟ್ವಾಳ ರೈಲ್ವೆ ನಿಲ್ದಾಣ ಜುಲೈ 17ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಕುವೆಂಪು ಅವರು ಈ ಕವನವನ್ನು ಬರೆದ ಸಮಯದಲ್ಲಿ ಬೌದ್ಧ ಧರ್ಮದ ನೇರ ಉಲ್ಲೇಖವನ್ನು ಮೂಲ ಸಾಲುಗಳಲ್ಲಿ ಸೇರಿಸಿರಲಿಲ್ಲ.ಆದರೆ, ಕರ್ನಾಟಕದ ಸುದೀರ್ಘ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಬೌದ್ಧ ಧರ್ಮದ ಕೊಡುಗೆಯೂ ಅಪಾರವಾಗಿರುವುದರಿಂದ, ಎಲ್ಲ ಧರ್ಮಗಳಿಗೆ ಸಮಾನ ಗೌರವ ಸಿಗಬೇಕು ಎನ್ನುವ ಕುವೆಂಪು ಅವರದೇ ಆದ ಆಶಯಕ್ಕೆ ಮತ್ತಷ್ಟು ಬಲ ತುಂಬಲು ಸಮಿತಿಯು ಈ ಹೆಜ್ಜೆ ಇಟ್ಟಿದೆ. ಈ ಮಹತ್ವದ ಸಲಹೆಯನ್ನು ಸರ್ಕಾರ ಅಧಿಕೃತವಾಗಿ ಒಪ್ಪಿ ಜಾರಿಗೆ ತಂದರೆ, ಮುಂದಿನ ದಿನಗಳಲ್ಲಿ ಹೊಸ ರೂಪದ ನಾಡಗೀತೆಯನ್ನು ಕನ್ನಡಿಗರು ಹಾಡಲಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *