ಪುತ್ತೂರು: ನಗರದ ಐತಿಹಾಸಿಕ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬೃಹತ್ ‘ಬಿಲ್ಡ್ ಟೆಕ್ ಎಕ್ಸ್‌ಪೋ’ (Build Tech Expo) ಗೆ ಫೆಬ್ರವರಿ 21ರಂದು ಶನಿವಾರ ಚಾಲನೆ ನೀಡಲಾಯಿತು. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಅರಿವು ಎಂಟರ್‌ಪ್ರೈಸಸ್ ಸಹಯೋಗದಲ್ಲಿ ಈ ಬೃಹತ್ ವಸ್ತುಪ್ರದರ್ಶನ ಆಯೋಜನೆಗೊಂಡಿದೆ.
ಎಕ್ಸ್‌ಪೋ ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕಟ್ಟಡ ನಿರ್ಮಿಸುವುದು ಇಂದಿನ ಕಾಲದ ಅನಿವಾರ್ಯತೆ. ಚೀನಾದಂತಹ ದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೆಲವೇ ಗಂಟೆಗಳಲ್ಲಿ ರಸ್ತೆ ನಿರ್ಮಿಸುತ್ತಾರೆ. ನಮ್ಮಲ್ಲೂ ಇಂತಹ ಹೊಸ ಆವಿಷ್ಕಾರಗಳು ಪರಿಚಯವಾಗಬೇಕು,” ಎಂದರು.

ಶಾಸಕರು ತಾವು ಬಿಲ್ಡರ್ ಆಗಿದ್ದ ಅನುಭವ ಹಂಚಿಕೊಳ್ಳುತ್ತಾ, “ಕಮರ್ಷಿಯಲ್ ಕಟ್ಟಡಕ್ಕೆ 2.5 ಹಾಗೂ ರೆಸಿಡೆನ್ಶಿಯಲ್ ಕಟ್ಟಡಕ್ಕೆ 2 ಎಫ್‌ಎಆರ್ (Floor Area Ratio) ಮಾಡಿಸಿಕೊಡುವ ಮೂಲಕ ಇಂಜಿನಿಯರ್‌ಗಳು ಮತ್ತು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ,” ಎಂದು ತಿಳಿಸಿದರು.ಫೆಬ್ರವರಿ 23ರವರೆಗೆ ನಡೆಯಲಿರುವ ಈ ಎಕ್ಸ್‌ಪೋದಲ್ಲಿ ಕಟ್ಟಡ ಸಾಮಗ್ರಿ, ಗೃಹಾಲಂಕಾರ ವಸ್ತುಗಳು, ಅತ್ಯಾಧುನಿಕ ಪೀಠೋಪಕರಣಗಳು, ನಿವೇಶನಗಳ ಮಾಹಿತಿ ಹಾಗೂ ಗೃಹಸಾಲದ ಸೌಲಭ್ಯಗಳ ಕುರಿತು ಹತ್ತಾರು ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: ಹಣದ ಆಸೆ ಬಿಟ್ಟು ಎನ್ಐಎಗೆ ಉಗ್ರರ ಮಾಹಿತಿ ನೀಡಿ: ಮುಸ್ಲಿಮರಿಗೆ ಇಮಾಮ್ ಕರೆ
ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಪಿಡಬ್ಲ್ಯುಡಿ ಇಂಜಿನಿಯರ್ ರಾಜೇಶ್ ರೈ, ಸುದ್ದಿ ಸಮೂಹದ ಡಾ. ಯು.ಪಿ. ಶಿವಾನಂದ, ಮಾಸ್ಟರ್ ಪ್ಲಾನರಿಯ ಆನಂದ್ ಕುಮಾರ್ ಎಸ್.ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

