ಪುತ್ತೂರು: ಕಬಕ-ಪುತ್ತೂರು ರೈಲ್ವೆ ನಿಲ್ದಾಣದ ಸಮೀಪದ ಹಾರಾಡಿ ರೈಲ್ವೆ ಸೇತುವೆ ಬಳಿ ರೈಲು ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಇದೊಂದು ಆಕಸ್ಮಿಕ ಅಪಘಾತ ಎಂದು ಅಂದಾಜಿಸಲಾಗಿದ್ದರೂ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ‘ಆತ್ಮಹತ್ಯೆ’ ಎಂಬ ಕಹಿ ಸತ್ಯ ಬಯಲಾಗಿದೆ.
ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ನಿವಾಸಿ ಸುಮತಿ ಎಂಬವರ ಪುತ್ರ ಪವನ್ ಕುಮಾರ್ (24) ಮೃತಪಟ್ಟ ದುರ್ದೈವಿ. ಫೆಬ್ರವರಿ 20ರ ರಾತ್ರಿ ಹಾರಾಡಿ ಸೇತುವೆ ಬಳಿ ಪವನ್ ಕುಮಾರ್ ರೈಲು ಡಿಕ್ಕಿಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.ಮೊದಲು ಪವನ್ ಹಳಿ ದಾಟುವಾಗ ಆಕಸ್ಮಿಕವಾಗಿ ರೈಲು ಡಿಕ್ಕಿಯಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಸ್ಥಳದ ಪರಿಶೀಲನೆ ಮತ್ತು ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ರೈಲ್ವೆ ಪೊಲೀಸರು ನಡೆಸಿದ ತನಿಖೆಯಲ್ಲಿ, ಪವನ್ ಕುಮಾರ್ ಉದ್ದೇಶಪೂರ್ವಕವಾಗಿ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ಪುತ್ತೂರು: ಹಾರಾಡಿ ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ; ಸ್ಥಳದಲ್ಲೇ ಸಾವು
ಯುವಕ ಇಂತಹ ತೀವ್ರ ನಿರ್ಧಾರ ಕೈಗೊಳ್ಳಲು ವೈಯಕ್ತಿಕ ಕಾರಣಗಳಿವೆಯೇ ಅಥವಾ ಬೇರೆ ಯಾವುದಾದರೂ ಒತ್ತಡವಿತ್ತೇ ಎಂಬ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

