ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ಹಾಗೂ ಲಂಚಾವತಾರ ನಡೆದಿದೆ ಎಂದು ಆರೋಪಿಸಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ‘X’ (ಟ್ವಿಟರ್) ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಗ್ರ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಸರಣಿ ಪ್ರಶ್ನೆಗಳನ್ನು ಎಸೆದಿರುವ ಅವರು, “ದೆಹಲಿಯಲ್ಲಿ ಯುವಕರ ಹಕ್ಕುಗಳ ಬಗ್ಗೆ ದೊಡ್ಡ ಭಾಷಣ ಬಿಗಿಯುವ ನೀವು, ಕರ್ನಾಟಕದಲ್ಲಿ ಲಕ್ಷಾಂತರ ಯುವಕರ ಭವಿಷ್ಯವನ್ನು ಮಾರಾಟಕ್ಕಿಟ್ಟಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
KPSC ಪಶುವೈದ್ಯಾಧಿಕಾರಿ ಹುದ್ದೆಗೆ ಬರೋಬ್ಬರಿ 80 ಲಕ್ಷ ರೂ.ವರೆಗೆ ಲಂಚದ ರೇಟ್ ಫಿಕ್ಸ್ ಮಾಡಲಾಗಿದೆ. ಹಗಲು-ರಾತ್ರಿ ಕಷ್ಟಪಟ್ಟು ಓದಿದ ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ‘ನಿರುದ್ಯೋಗ ಭಾಗ್ಯ’ ನೀಡಲಾಗಿದ್ದು, ಹಣ ಚೆಲ್ಲಿದ ಭ್ರಷ್ಟರಿಗೆ ‘ಉದ್ಯೋಗದ ಭಾಗ್ಯ’ ಸಿಗುತ್ತಿದೆ. ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಯಿಂದ ಹಿಡಿದು ಪಶುವೈದ್ಯಾಧಿಕಾರಿಗಳ ನೇಮಕಾತಿವರೆಗೆ ಪ್ರತಿಯೊಂದು ಹುದ್ದೆಗೂ ಬೆಲೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮಲ್ಲೇಶ್ವರಕ್ಕೊಂದು ಕಾನೂನು, ಶಿವಾಜಿನಗರಕ್ಕಿನ್ನೊಂದಾ?”: ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಭಾರಿ ವಾಗ್ದಾಳಿ
KPSCಯಲ್ಲಿ ನಡೆಯುತ್ತಿರುವ ಈ ಬೃಹತ್ ಲೂಟಿಯಲ್ಲೂ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಕಮಿಷನ್ ಪಾಲು ತಲುಪುತ್ತಿದೆಯೇ? ಎಂದು ಅಶೋಕ್ ನೇರವಾಗಿ ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ಯುವಕರ ಜಪ ಮಾಡುವ ಕಾಂಗ್ರೆಸ್, ಕರ್ನಾಟಕದಲ್ಲಿ ಉದ್ಯೋಗಾಕಾಂಕ್ಷಿಗಳ ಜೇಬಿಗೆ ಕನ್ನ ಹಾಕುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ.
KPSC ನಡೆಸಿರುವ ಈ ಕಲುಷಿತ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಸಿಗುವವರೆಗೆ ಈ ‘ಲೂಟಿ ಸರ್ಕಾರ’ದ ವಿರುದ್ಧ ಬಿಜೆಪಿ ತನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

