ಉಡುಪಿ: ಬದನಿಡಿಯೂರು ಗ್ರಾಮದಲ್ಲಿ ಬೀಚ್‌ಸೈಡ್ ರೆಸಾರ್ಟ್ ನಿರ್ಮಾಣಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವೈಯಕ್ತಿಕ ದ್ವೇಷದಿಂದ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.
ಶನಿವಾರ ಉಡುಪಿಯ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜಕೀಯ ನನ್ನ ವೃತ್ತಿಯಲ್ಲ, ಆಸಕ್ತಿ ಮಾತ್ರ. ಪ್ರವಾಸೋದ್ಯಮ ಉತ್ತೇಜನದ ಉದ್ದೇಶದಿಂದ 1.60 ಎಕರೆ ಸಮುದ್ರ ತೀರದ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಯೋಜನೆ ರೂಪಿಸಿ ಅಗತ್ಯ ಅನುಮತಿಗಳನ್ನು ಪಡೆದಿದ್ದೇನೆ” ಎಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಸಿಂಗಲ್ ಲೇಔಟ್ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಅನುಮತಿ ಸಿಗಲಿಲ್ಲ. “ಹೈಕೋರ್ಟ್ ಮೊರೆ ಹೋದ ಬಳಿಕ ಫೆಬ್ರವರಿ 20ರಂದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅನುಮತಿ ನೀಡುವಂತೆ ನಿರ್ದೇಶನ ಬಂದಿದೆ. ಒಂದು ತಿಂಗಳಾದರೂ ಅನುಮತಿ ಪತ್ರ ನೀಡಲಾಗಿಲ್ಲ” ಎಂದು ಭಟ್ ಹೇಳಿದ್ದಾರೆ.
ಇದನ್ನೂ ಓದಿ: ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬಿಕ್ಕಟ್ಟು! ಪಾತಾಳಕ್ಕೆ ಕುಸಿದ ಮೀನಿನ ದರ
ತಾವು ಮೂರು ಬಾರಿ ಶಾಸಕನಾಗಿ ಸೇವೆ ಸಲ್ಲಿಸಿದ ವೇಳೆ ಯಾವುದೇ ಬೇಧಭಾವವಿಲ್ಲದೆ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಆದರೆ ಈಗ ವೈಯಕ್ತಿಕ ದ್ವೇಷದಿಂದ ಕಳೆದ 24 ತಿಂಗಳಿನಿಂದ ತೊಂದರೆ ಎದುರಿಸುತ್ತಿದ್ದೇನೆ ಎಂದು ಆರೋಪಿಸಿದರು.
ಜಿಲ್ಲಾಡಳಿತ ಮೌನ ವಹಿಸಿರುವುದರ ಜೊತೆಗೆ ನ್ಯಾಯಾಲಯದ ಆದೇಶಕ್ಕೂ ಗೌರವ ನೀಡಲಾಗುತ್ತಿಲ್ಲ. “ನಗರಾಭಿವೃದ್ಧಿ ಆಯುಕ್ತರು ಒತ್ತಡಕ್ಕೆ ಒಳಗಾಗಿರುವಂತೆ ಕಾಣುತ್ತಿದೆ” ಎಂದು ಅವರು ದೂರಿದರು.
ಈ ಹಿನ್ನೆಲೆಯಲ್ಲಿ ಮಾರ್ಚ್ 23ರಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು. “ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ. ಸಿಂಗಲ್ ಲೇಔಟ್ ಅನುಮತಿ ನೀಡಬೇಕು ಅಥವಾ ಲಿಖಿತವಾಗಿ ತಿರಸ್ಕರಿಸಬೇಕು. ತಿರಸ್ಕಾರ ನೀಡಿದರೆ ಕಾನೂನು ಹೋರಾಟ ನಡೆಸುತ್ತೇನೆ” ಎಂದು ಭಟ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

