ಡಾಲರ್ ಎದುರು 26 ಪೈಸೆ ಚೇತರಿಸಿಕೊಂಡ ಭಾರತೀಯ ರೂಪಾಯಿ; 94.90 ರೂ.ಗೆ ತಲುಪಿದ ಮೌಲ್ಯ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಯಲ್ಲಿ ಉಂಟಾಗಿರುವ ಇಳಿಕೆಯ ಬೆಂಬಲದೊಂದಿಗೆ, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 26 ಪೈಸೆಗಳಷ್ಟು ಜಿಗಿತ ಕಂಡು 94.90 ರೂ. ತಲುಪಿದೆ.

ತೈಲ ಬೆಲೆ ಇಳಿಕೆ ಮತ್ತು ಮಾರುಕಟ್ಟೆ ಸ್ಥಿರತೆ:

ವಿದೇಶಿ ವಿನಿಮಯ ಮಾರುಕಟ್ಟೆ (Forex) ತಜ್ಞರ ಪ್ರಕಾರ, ಪಶ್ಚಿಮ ಏಷ್ಯಾ ಸಂಘರ್ಷಕ್ಕೂ ಮುನ್ನ ಇದ್ದ ಸಾಮಾನ್ಯ ಮಟ್ಟಕ್ಕೆ ಕಚ್ಚಾ ತೈಲ ಬೆಲೆಗಳು ಮರಳಿರುವುದು ರೂಪಾಯಿ ಮೌಲ್ಯದ ವೃದ್ಧಿಗೆ ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿದ್ದ ಆತಂಕದ ವಾತಾವರಣ ತಿಳಿಯಾಗಿದ್ದು, ಹೂಡಿಕೆದಾರರ ಸೆಂಟಿಮೆಂಟ್ ಸ್ಥಿರಗೊಂಡಿದೆ. ಜೂನ್ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಬಾಂಡ್ ಮಾರುಕಟ್ಟೆಗೆ ಭಾರಿ ಪ್ರಮಾಣದ ಬಂಡವಾಳವನ್ನು ಹರಿಸಿದ್ದು ಕೂಡ ರೂಪಾಯಿಗೆ ಬಲ ನೀಡಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ರೂಪಾಯಿ ಮೌಲ್ಯವು 94.95 ರೂ. ನಲ್ಲಿ ವಹಿವಾಟು ಆರಂಭಿಸಿ, ತದನಂತರ 94.90 ರೂ.ಗೆ ಏರಿಕೆಯಾಯಿತು. ಇದು ಬುಧವಾರದ ಮುಕ್ತಾಯದ ಮೌಲ್ಯವಾಗಿದ್ದ 95.16 ರೂ. ಗೆ ಹೋಲಿಸಿದರೆ 26 ಪೈಸೆಗಳಷ್ಟು ಲಾಭ ದಾಖಲಿಸಿದೆ.

ಇದನ್ನೂ ಓದಿ: ಎಸ್‌ಬಿಐ, ಕೆನರಾ ಬ್ಯಾಂಕ್ ಮತ್ತು ಪಿಎನ್‌ಬಿ ವಿಲೀನ ಸುದ್ದಿ ಸಂಪೂರ್ಣ ಸುಳ್ಳು!: ಸಾಮಾಜಿಕ ಜಾಲತಾಣಗಳ ವೈರಲ್ ಪೋಸ್ಟ್‌ಗೆ ‘ಪಿಐಬಿ ಫ್ಯಾಕ್ಟ್ ಚೆಕ್’ ಸ್ಪಷ್ಟನೆ!

ಆರ್‌ಬಿಐ ಹಸ್ತಕ್ಷೇಪದ ನಿರೀಕ್ಷೆ:

“ಭಾರತಕ್ಕೆ ಹೊಸ ವಿದೇಶಿ ಬಂಡವಾಳ ಹರಿದುಬರುತ್ತಿದ್ದರೂ, ಮಾರುಕಟ್ಟೆ ತಜ್ಞರ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಂಡವಾಳದ ಬಹುಭಾಗವನ್ನು ತನ್ನಲ್ಲಿಯೇ ಹೀರಿಕೊಳ್ಳುವ ಸಾಧ್ಯತೆಯಿದೆ. ಆರ್‌ಬಿಐ ರೂಪಾಯಿ ಮೌಲ್ಯವನ್ನು ಸಂಪೂರ್ಣವಾಗಿ ಮುಕ್ತವಾಗಿ ಬಲಗೊಳ್ಳಲು ಬಿಡುವ ಬದಲು, ಮಾರುಕಟ್ಟೆ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಬಹುದು” ಎಂದು ಸಿಆರ್ ಫಾರೆಕ್ಸ್ ಅಡ್ವೈಸರ್ಸ್‌ನ (CR Forex Advisors) ವ್ಯವಸ್ಥಾಪಕ ನಿರ್ದೇಶಕರಾದ ಅಮಿತ್ ಪಬಾರಿ ತಿಳಿಸಿದ್ದಾರೆ.

ಪ್ರಸ್ತುತ ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ ದರವು ಶೇ. 1.13 ರಷ್ಟು ಕುಸಿತ ಕಂಡು ಪ್ರತಿ ಬ್ಯಾರೆಲ್‌ಗೆ 70.76 ಡಾಲರ್‌ಗೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಡಾಲರ್ ಇಂಡೆಕ್ಸ್ ಕೂಡ ಅಲ್ಪ ಪ್ರಮಾಣದ ಕುಸಿತ ಕಂಡಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ