Salim Merchant: ‘ರಾಮಾಯಣ’ದ ಉದಾಹರಣೆ ನೀಡಿ ಎಆರ್ ರೆಹಮಾನ್ ಆರೋಪ ಅಲ್ಲಗೆಳೆದ ಸಲೀಂ ಮರ್ಚೆಂಟ್

ಹಿಂದಿ ಚಿತ್ರರಂಗದಲ್ಲಿ ಧಾರ್ಮಿಕ ಪಕ್ಷಪಾತ ಇದೆ ಎಂಬ ವಿಚಾರದ ಬಗ್ಗೆ ನಡೆದ ಚರ್ಚೆಗೆ ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಕೋಮು ರಾಜಕೀಯದ ಬಗ್ಗೆ ಆರೋಪ ಮಾಡಿದ್ದ ಗಾಯಕ ಎಆರ್ ರಹಮಾನ್ ಅವರ ಹೇಳಿಕೆಗೆ ಗೌರವ ವ್ಯಕ್ತಪಡಿಸಿದರೂ, ತಮ್ಮ ದೃಷ್ಟಿಯಲ್ಲಿ ಅಂತಹ ಸಮಸ್ಯೆ ಬಾಲಿವುಡ್‌ನಲ್ಲಿ ಇದೆ ಎಂದು ನಂಬುವುದಿಲ್ಲ ಎಂದು ಹೇಳಿದ್ದಾರೆ.

ರಹಮಾನ್ ಹೇಳಿದ್ದಾರೆ ಎನ್ನುವುದನ್ನು ನಾನು ಸಂಪೂರ್ಣವಾಗಿ ತಪ್ಪು ಎಂದು ಹೇಳುವುದಿಲ್ಲ. ಅದು ಅವರ ವೈಯಕ್ತಿಕ ಅನುಭವವಾಗಿರಬಹುದು. ಆದರೆ ನನ್ನ ಅನುಭವದಲ್ಲಿ ಹಾಗೆ ಕಾಣಿಸುವುದಿಲ್ಲ ಎಂದು ಸಲೀಂ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, ಚಿತ್ರರಂಗದಲ್ಲಿ ಪ್ರತಿಯೊಬ್ಬರ ಅನುಭವ ಮತ್ತು ದೃಷ್ಟಿಕೋನ ವಿಭಿನ್ನವಾಗಿರಬಹುದು ಎಂದಿದ್ದಾರೆ.

Advertisement

ರಾಮಾಯಣ ಸಿನಿಮಾವನ್ನು ಉದಾಹರಣೆ ನೀಡಿದ ಸಲಿಂ

ತಮ್ಮ ಅಭಿಪ್ರಾಯವನ್ನು ವಿವರಿಸುವಾಗ ಸಲಿಂ ಮರ್ಚೆಂಟ್, ಹಿಂದೂ ಮಹಾಕಾವ್ಯವನ್ನು ಆಧಾರವಾಗಿಟ್ಟುಕೊಂಡು ತಯಾರಾಗುತ್ತಿರುವ ಬಹು ನಿರೀಕ್ಷಿತ ಸಿನಿಮಾ ರಾಮಾಯಣವನ್ನು ಉದಾಹರಣೆಯಾಗಿ ನೀಡಿದರು. ಭಾರತೀಯ ಸಿನೆಮಾ ಇತಿಹಾಸದಲ್ಲೇ ದೊಡ್ಡ ಯೋಜನೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ರಾಮಾಯಣ ಸಿನಿಮಾಗೆ ಸಂಗೀತ ನೀಡುತ್ತಿರುವವರು ರಹಮಾನ್. ಒಂದು ಹಿಂದೂ ಮಹಾಕಾವ್ಯ ಆಧಾರಿತ ಸಿನಿಮಾಗೆ ಅವರೇ ಸಂಗೀತ ನಿರ್ದೇಶಕರಾಗಿದ್ದರೆ, ಚಿತ್ರರಂಗದಲ್ಲಿ ಧಾರ್ಮಿಕ ಸಮಸ್ಯೆ ಇದೆ ಎಂದು ನಾನು ಭಾವಿಸುವುದಿಲ್ಲ ಎಂದು ಸಲಿಂ ಹೇಳಿದರು.

ರಹಮಾನ್ ಹೇಳಿದ್ದೇನು?

ಎಆರ್ ರಹಮಾನ್ ಅವರು ಬಿಬಿಸಿ ಏಷಿಯನ್ ನೆಟ್‌ವರ್ಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ನೀಡಿದ ಹೇಳಿಕೆ ಈ ಎಲ್ಲಾ ಚರ್ಚೆಗಳಿಗೆ ಕಾರಣವಾಗಿದೆ. “ಚಿತ್ರರಂಗದಲ್ಲಿ ಈಗ ಸೃಜನಾತ್ಮಕ ವ್ಯಕ್ತಿಗಳಲ್ಲದ ಕೆಲವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಧಾರ್ಮಿಕ ಅಂಶವೂ ಇರಬಹುದು ಎಂದು ಕೇಳಿಬರುತ್ತದೆ ಎಂದು ಅವರು ಹೇಳಿದ್ದಾರೆ.

ರಹಮಾನ್ ಪ್ರಕಾರ, ಕೆಲವೊಮ್ಮೆ ನಿರ್ಮಾಪಕರು ಅಥವಾ ತಂಡಗಳು ಅವರನ್ನು ಆಯ್ಕೆ ಮಾಡಿದ್ದರೂ, ನಂತರ ಸಂಗೀತ ಕಂಪನಿಗಳು ಬೇರೆ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡುವ ಪರಿಸ್ಥಿತಿಗಳು ಎದುರಾಗಿವೆ ಎಂದು ತಿಳಿಸಿದ್ದಾರೆ.

ಈ ಹೇಳಿಕೆಗಳ ನಂತರ ಬಾಲಿವುಡ್ ಮತ್ತು ಭಾರತೀಯ ಚಿತ್ರರಂಗದಲ್ಲಿ ಈ ವಿಷಯದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಕೆಲವರು ರಹಮಾನ್ ಮಾತಿಗೆ ಬೆಂಬಲ ನೀಡುತ್ತಿದ್ದರೆ, ಇನ್ನೂ ಕೆಲವರು ಸಲಿಂ ಮರ್ಚೆಂಟ್ ಹಾಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು