ಮಂಗಳೂರು: ಶ್ರೀರಾಮ ವಿದ್ಯಾಕೇಂದ್ರ ಮತ್ತು ಶ್ರೀರಾಮ ಪದವಿಪೂರ್ವ ವಿದ್ಯಾಲಯದ ವಿಂಶತಿ ಸಂಭ್ರಮದ ಅಂಗವಾಗಿ ‘ಕುಟುಂಬ ಮಿಲನ – ವಿವೇಕ ಸಂಗಮ’ ಕಾರ್ಯಕ್ರಮವು ಫೆಬ್ರವರಿ 15, 2026ರಂದು ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೌಟುಂಬಿಕ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, “ಮನೆಯೇ ಮೊದಲ ಪಾಠಶಾಲೆ, ಮನೆಯೇ ಮಂತ್ರಾಲಯ. ಸುಸಂಸ್ಕೃತ ಕುಟುಂಬವು ದೇಶಭಕ್ತಿಯನ್ನು ಮೂಡಿಸುವ ಪ್ರಬಲ ಶಕ್ತಿಯಾಗಿದೆ,” ಎಂದು ಅಭಿಪ್ರಾಯಪಟ್ಟರು. ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಶ್ರೀ ಗಣೇಶ್ ಕುದ್ರೋಳಿ ಅವರು ‘ಶಿಕ್ಷಣದಲ್ಲಿ ಜಾದೂ’ ಎಂಬ ವಿಶೇಷ ಅವಧಿಯನ್ನು ನಡೆಸಿ ಮಕ್ಕಳನ್ನು ಮತ್ತು ಪೋಷಕರನ್ನು ರಂಜಿಸಿದರು.
ಇದನ್ನೂ ಓದಿ: ಕಲ್ಲಡ್ಕ ಶ್ರೀ ರಾಮ ಪದವಿಪೂರ್ವ ಕಾಲೇಜಿನಲ್ಲಿ ದೀಪಪ್ರದಾನ ಕಾರ್ಯಕ್ರಮ

ಹಿರಿಯ ವಿದ್ಯಾರ್ಥಿಗಳಾದ ರಂಜನ್, ವಿಂಧ್ಯಾ ಹಾಗೂ ಶ್ರೀಮತಿ ಲತಾ ಅವರು ಬಾಲಗೋಕುಲ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಿದ್ದರು. ವ್ಯಕ್ತಿ ತನ್ನ ನಡೆ-ನುಡಿಗಳ ಮೂಲಕ ಮಾತೃಭೂಮಿಯ ಹೆಸರನ್ನು ಉಳಿಸಲು ಕುಟುಂಬವು ಹೇಗೆ ಸಹಕಾರಿಯಾಗುತ್ತದೆ ಎಂಬ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

