ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೀಪಪ್ರದಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಫೆ.9 ರಂದು ನಡೆಯಿತು. ಅತಿಥಿಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಈ ಸಂಸ್ಥೆಯು ನಿಮಗೆ ನೀಡಿದ ರಾಷ್ಟ್ರೀಯ ಚಿಂತನೆ ಎಂಬ ಜ್ಞಾನದ ಬುತ್ತಿಯನ್ನು ಎಲ್ಲಾ ಕಡೆ ಪ್ರಸರಿಸುವುದು ನಿಮ್ಮ ಜವಾಬ್ದಾರಿ ಎಂದರು.

ಅಭ್ಯಾಗತರಾಗಿ ಆಗಮಿಸಿದ್ದ ಮಣಿಪಾಲ್ ಫೌಂಡೇಶನ್‌ನ ಮಹಾಲಕ್ಷ್ಮಿ ನಾಯಕ್, ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಜನೆಯನ್ನು ಪಡೆದ ನೀವು ಪುಣ್ಯವಂತರು. ರಾಷ್ಟ್ರೀಯ ಚಿಂತನೆಯ ಜೊತೆಗೆ ಉತ್ತಮ ನಾಗರಿಕರಾಗಿ ಬೆಳೆದು ಯಶಸ್ಸನ್ನು ಸಾಧಿಸಿ ಎಂದರು.
ಇದನ್ನ ಓದಿ: ಕಲ್ಲಡ್ಕ ಶ್ರೀರಾಮ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಸಮಾರೋಪ

ಅತಿಥಿ ಅಭ್ಯಾಗತರಾದ ಪ್ರಸಾದ್ ನೇತ್ರಾಲಯ ಚೇರ್ಮನ್ ಡಾ. ಕೃಷ್ಣಪ್ರಸಾದ್, ಗುರು ಹಿರಿಯರನ್ನು, ತಂದೆ ತಾಯಿಯನ್ನು, ಹಾಗೂ ನಿಮಗೆ ಶಿಕ್ಷಣವನ್ನು ಒದಗಿಸಿದ ವಿದ್ಯಾಸಂಸ್ಥೆಯನ್ನು ನೀವು ಎಂದಿಗೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬಳಿಕ, ಜ್ಞಾನದ ಸಂಕೇತವಾದ ದೀಪವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಆಡಳಿತ ಮಂಡಳಿ ಸದಸ್ಯರಾದ ನಾಗೇಶ್ ಕಲ್ಲಡ್ಕ, ಡಾ|ಕಮಲ ಪ್ರಭಾಕರ್ ಭಟ್ ಹಾಗೂ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಉಪ ಪ್ರಾಂಶುಪಾಲ ದಿನೇಶ್ ಉಪಸ್ಥಿತರಿದ್ದರು. ಪ್ರಥಮ ಪಿಯುಸಿ ವಿಭಾಗದ ಕುಮಾರಿ ಶ್ರೇಯ ಸ್ವಾಗತಿಸಿ, ಕುಮಾರಿ ತೃಷ ವಂದಿಸಿದರು. ಕುಮಾರಿ ಕೃತಿಕಾ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

