ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ (Credit Card) ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗವಾಗಿದೆ. ಅನೇಕ ಜನರು ಇದನ್ನು ಕೇವಲ ಸಾಲದ ಸಾಧನವಾಗಿ ನೋಡುತ್ತಾರೆ. ಆದರೆ ಸರಿಯಾದ ಹಣಕಾಸಿನ ಶಿಸ್ತಿನೊಂದಿಗೆ (Financial Discipline) ಬಳಸಿದರೆ ಇದು ಉಚಿತವಾಗಿ ಹಣ ಅಥವಾ ಉಳಿತಾಯವನ್ನು ತಂದುಕೊಡುವ ಅತ್ಯುತ್ತಮ ಮಾರ್ಗವಾಗಿದೆ. ಆದಾಗ್ಯೂ, ಹೆಚ್ಚಿನ ರಿವಾರ್ಡ್ಸ್ ಮತ್ತು ಕ್ಯಾಶ್‌ಬ್ಯಾಕ್ ಪಡೆಯುವ ಆಸೆಗೆ ಬಿದ್ದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು (Overspending) ದೊಡ್ಡ ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಸ್ಮಾರ್ಟ್ ಆಗಿ ಕ್ರೆಡಿಟ್ ಬಳಸುವ ಕಲೆ ತಿಳಿದುಕೊಳ್ಳುವುದು ಅತ್ಯಗತ್ಯ.
ಕ್ರೆಡಿಟ್ ಕಾರ್ಡ್ ಬಳಸುವಾಗ ಬಹುತೇಕರು ಮಾಡುವ 3 ಪ್ರಮುಖ ತಪ್ಪುಗಳು ಮತ್ತು ಅವುಗಳ ಆರ್ಥಿಕ ಪರಿಣಾಮಗಳ ವಿವರ ಇಲ್ಲಿದೆ:

ರಿವಾರ್ಡ್ ಪಾಯಿಂಟ್‌ಗಳಿಗಾಗಿ ಅನಗತ್ಯ ಖರ್ಚು:
ಕೆಲವು ಬ್ಯಾಂಕ್‌ಗಳು ಇಂತಿಷ್ಟು ಅವಧಿಯಲ್ಲಿ ಇಷ್ಟು ಖರ್ಚು ಮಾಡಿದರೆ ಬಂಪರ್ ಬೋನಸ್ ಪಾಯಿಂಟ್ ಅಥವಾ ಗಿಫ್ಟ್ ವೋಚರ್ ಸಿಗುತ್ತದೆ ಎಂಬ ಆಫರ್ ನೀಡುತ್ತವೆ. ಈ ಆಫರ್ ಪಡೆಯುವ ಹುಚ್ಚಿನಲ್ಲಿ ಅನೇಕ ಗ್ರಾಹಕರು ತಮಗೆ ಸದ್ಯಕ್ಕೆ ಬೇಡದ ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಕೊನೆಗೆ ಬಿಲ್ ಕಟ್ಟಲಾಗದೆ ಸಾಲದ ಸುಳಿಗೆ ಸಿಲುಕುತ್ತಾರೆ.
ಇದನ್ನೂ ಓದಿ:
ಕೇವಲ ಕನಿಷ್ಠ ಮೊತ್ತ (Minimum Due) ಪಾವತಿಸುವುದು:
ಇದು ಕ್ರೆಡಿಟ್ ಕಾರ್ಡ್ ಬಳಕೆದಾರರು ಮಾಡುವ ಅತ್ಯಂತ ಗಂಭೀರವಾದ ತಪ್ಪು. ಬಿಲ್ ಬಂದಾಗ ಪೂರ್ಣ ಮೊತ್ತವನ್ನು ಪಾವತಿಸದೆ ಕೇವಲ ಕನಿಷ್ಠ ಮೊತ್ತವನ್ನು (ಜೊತೆಗೆ ಇಎಂಐ) ಪಾವತಿಸಿ ಸುಮ್ಮನಾಗುತ್ತಾರೆ. ನೆನಪಿಡಿ, ಹೀಗೆ ಮಾಡಿದಾಗ ಉಳಿದ ಬಾಕಿ ಮೊತ್ತದ ಮೇಲೆ ಶೇಕಡಾ 40 ಕ್ಕಿಂತ ಹೆಚ್ಚು ವಾರ್ಷಿಕ ಬಡ್ಡಿ (Interest) ವಿಧಿಸಲಾಗುತ್ತದೆ. ಇದರಿಂದ ನಿಮಗೆ ಸಿಕ್ಕ ರಿವಾರ್ಡ್ಸ್‌ಗಿಂತ ನೀವು ಬ್ಯಾಂಕ್‌ಗೆ ಕಟ್ಟುವ ಬಡ್ಡಿಯೇ ದುಪ್ಪಟ್ಟಾಗುತ್ತದೆ.
ಲೈಫ್‌ಸ್ಟೈಲ್‌ಗೆ ಹೊಂದದ ಕಾರ್ಡ್ ಆರಿಸಿಕೊಳ್ಳುವುದು:
ಪ್ರತಿಯೊಬ್ಬರ ಜೀವನಶೈಲಿಗೆ ತಕ್ಕಂತೆ ಮಾರುಕಟ್ಟೆಯಲ್ಲಿ ವಿಭಿನ್ನ ಕ್ರೆಡಿಟ್ ಕಾರ್ಡ್‌ಗಳು ಲಭ್ಯವಿವೆ. ಉದಾಹರಣೆಗೆ, ನೀವು ಹೆಚ್ಚಾಗಿ ಆನ್‌ಲೈನ್ ಶಾಪಿಂಗ್ ಮಾಡದಿದ್ದರೂ ಶಾಪಿಂಗ್ ಕಾರ್ಡ್ ಹೊಂದುವುದು ಅಥವಾ ವರ್ಷಕ್ಕೆ ಒಮ್ಮೆಯೂ ವಿಮಾನ ಪ್ರಯಾಣ ಮಾಡದಿದ್ದರೂ ದುಬಾರಿ ವಾರ್ಷಿಕ ಶುಲ್ಕವಿರುವ (Annual Fee) ಟ್ರಾವೆಲ್ ಕಾರ್ಡ್ ಹೊಂದುವುದರಿಂದ ಯಾವುದೇ ಲಾಭವಿಲ್ಲ. ನಿಮ್ಮ ಖರ್ಚುಗಳ ಸ್ವರೂಪಕ್ಕೆ ಹೊಂದಿಕೆಯಾಗುವ ಕಾರ್ಡ್ ಆರಿಸಿಕೊಂಡಾಗ ಮಾತ್ರ ಉಳಿತಾಯ ಸಾಧ್ಯ.

