ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್‌ಗೆ ಹೊಸ ನಾಯಕಿ!: ಹರ್ಮನ್‌ಪ್ರೀತ್ ಕೌರ್ ರಾಜೀನಾಮೆ, ಸ್ಮೃತಿ ಮಂಧನ ಕ್ಯಾಪ್ಟನ್

ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. 2025ರ ಏಕದಿನ ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರು ತಮ್ಮ ಕ್ಯಾಪ್ಟನ್ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಲ್‌ರೌಂಡರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ (Smriti Mandhana) ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನೂತನ ನಾಯಕಿಯನ್ನಾಗಿ ಮಂಗಳವಾರ ನೇಮಕ ಮಾಡಿದೆ.

ಸ್ಮೃತಿ ಮಂಧನ ಅವರು ಇನ್ಮುಂದೆ ಭಾರತ ಮಹಿಳಾ ತಂಡದ ಪೂರ್ಣಪ್ರಮಾಣದ ‘ವೈಟ್ ಬಾಲ್’ (ಏಕದಿನ ಹಾಗೂ ಟಿ20) ಕ್ರಿಕೆಟ್ ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಮಂಧನ ನಾಯಕತ್ವಕ್ಕೆ ಆರ್‌ಸಿಬಿ ಗೆಲುವು, ಅಪಾರ ಅನುಭವವೇ ಬಲ:

2013 ರಿಂದ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಅಂಗವಾಗಿರುವ 29 ವರ್ಷದ ಸ್ಮೃತಿ ಮಂಧನ, ಈವರೆಗೆ ಭಾರತ ಉಪನಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಡಬ್ಲ್ಯೂಪಿಎಲ್ ಚಾಂಪಿಯನ್ ನಾಯಕಿ: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು 2024 ಹಾಗೂ 2026 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಮಂಧನ ಅವರಿಗಿದೆ.

ವಿಶ್ವಕಪ್ ಮತ್ತು ಮೈಲಿಗಲ್ಲು: 2025ರ ಏಕದಿನ ವಿಶ್ವಕಪ್‌ನಲ್ಲಿ 434 ರನ್ ಬಾರಿಸಿ ದ್ವಿತೀಯ ಗರಿಷ್ಠ ರನ್ ಕಲೆಹಾಕಿದ್ದ ಮಂಧನ, ಜೂನ್ 2025ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಶತಕ ಸಿಡಿಸುವ ಮೂಲಕ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಅಂತರರಾಷ್ಟ್ರೀಯ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ದಾಖಲೆ ಬರೆದಿದ್ದರು.

ಈವರೆಗಿನ ಕ್ಯಾಪ್ಟನ್ಸಿ: ಮಂಧನ ಈವರೆಗೆ 18 ಟಿ20 ಹಾಗೂ 4 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ: ಕನ್ನಡಿಗ ಕ್ರೀಡಾಪಟುಗಳಿಗೆ ಜಾಕ್‌ಪಾಟ್!: ಏಷ್ಯನ್ ಗೇಮ್ಸ್ ಪದಕ ವಿಜೇತರ ನಗದು ಬಹುಮಾನ ಭಾರಿ ಹೆಚ್ಚಳ

ಹರ್ಮನ್‌ಪ್ರೀತ್ ರಾಜೀನಾಮೆಗೆ ಕಾರಣವೇನು?:

2025 ರ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟಿದ್ದ ಹರ್ಮನ್‌ಪ್ರೀತ್ ಕೌರ್, ಇತ್ತೀಚೆಗೆ ಗೌಹಾತಿಯಲ್ಲಿ ನಡೆದ ಬಿಸಿಒಸಿಐ ಪರಿಶೀಲನಾ ಸಭೆಯ ಬಳಿಕ ಎಲ್ಲ ಮಾದರಿಯ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸುವ ಮುನ್ನವೇ ನಿರ್ಗಮಿಸಿದ್ದು ಹಾಗೂ ಇತ್ತೀಚಿನ ಸರಣಿಗಳ ಪ್ರದರ್ಶನವನ್ನು ಸಭೆಯಲ್ಲಿ ಪರಾಮರ್ಶಿಸಲಾಗಿತ್ತು.

“ಭಾರತ ತಂಡವನ್ನು ಮುನ್ನಡೆಸುವುದು ಅತ್ಯಂತ ವಿಶೇಷ ಗೌರವ. ನನ್ನ ಮೇಲೆ ನಂಬಿಕೆ ಇಟ್ಟ ಬಿಸಿಒಸಿಐ, ಆಯ್ಕೆಗಾರರು ಹಾಗೂ ಸಹಪಾಠಿಗಳಿಗೆ ಧನ್ಯವಾದಗಳು. ಹರ್ಮನ್‌ಪ್ರೀತ್ ಕೌರ್ ಅವರ ಕೊಡುಗೆ ಸ್ಮರಣೀಯ,” ಎಂದು ನೂತನ ನಾಯಕಿ ಸ್ಮೃತಿ ಮಂಧನ ಸಂತಸ ಹಂಚಿಕೊಂಡಿದ್ದಾರೆ.

ಸ್ಮೃತಿ ಮಂಧನ ಸಾರಥ್ಯದ ಭಾರತ ತಂಡಕ್ಕೆ ಅಕ್ಟೋಬರ್ 16 ರಿಂದ ಆರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಸರಣಿ ಮೊದಲ ಸವಾಲಾಗಿದ್ದು, ಮುಂಬರುವ ಫೆಬ್ರವರಿಯಲ್ಲಿ ಭಾರತದಲ್ಲೇ ನಡೆಯಲಿರುವ ‘ಮಹಿಳಾ ಚಾಂಪಿಯನ್ಸ್ ಟ್ರೋಫಿ’ಯ ಮೇಲೆ ಎಲ್ಲರ ಕಣ್ಣಿಟ್ಟಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *