ಪ್ರತಿಭಟನಾ ನಿರತರನ್ನು ‘ಜಿರಳೆ’ಗೆ ಹೋಲಿಸಿದ ಸಿಆರ್‌ಪಿಎಫ್ ಅಧಿಕಾರಿ: ಆರ್‌ಎಎಫ್ ಕಮಾಂಡೆಂಟ್ ಸೋನಿಯಾ ಸೆಹ್ರಾವತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ತೀವ್ರ ಆಕ್ರೋಶ

ದೆಹಲಿ: ದೆಹಲಿಯಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಜಿರಳೆಗೆ ಹೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಆರ್‌ಎಎಫ್ (RAF) ಅಧಿಕಾರಿ ಸೋನಿಯಾ ಸೆಹ್ರಾವತ್ ಭಾರಿ ವಿವಾದಕ್ಕೆ ಸಿಲುಕಿದ್ದಾರೆ.

ರಾಪಿಡ್ ಆಕ್ಷನ್ ಫೋರ್ಸ್‌ನ (RAF) ಸಹಾಯಕ ಕಮಾಂಡೆಂಟ್ ಆಗಿರುವ ಸೋನಿಯಾ, ಪ್ರತಿಭಟನೆ ಹತೋಟಿಗೆ ತರುವ ಭದ್ರತಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಈ ಪೋಸ್ಟ್ ಹಂಚಿಕೊಂಡಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಳೆಗಾಲದ ಸಂಸತ್ ಅಧಿವೇಶನದ ಮೊದಲ ದಿನದಂದು ನೀಟ್ ಪೇಪರ್ ಲೀಕ್ ಖಂಡಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದರು.

ಈ ಪ್ರತಿಭಟನೆಯಲ್ಲಿ ಸಕ್ರಿಯವಾಗಿದ್ದ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಸಂಘಟನೆಯನ್ನು ಲಕ್ಷ್ಯವಾಗಿಸಿಕೊಂಡು ಅಧಿಕಾರಿ ಸೋನಿಯಾ ಸೆಹ್ರಾವತ್, ಸತ್ತ ಜಿರಳೆಯ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು “ತಮ್ಮನ್ನೇ ಸರಿಪಡಿಸಿಕೊಳ್ಳಲು ಆಗದವರು ದೇಶವನ್ನು ಸರಿಪಡಿಸಲು ಹೊರಟಿದ್ದಾರೆ” ಎಂದು ಬರೆದುಕೊಂಡಿದ್ದರು.

ಸೋನಿಯಾ ಅವರ ಪೋಸ್ಟ್ ತೀವ್ರ ವಿವಾದಕ್ಕೀಡಾಗುತ್ತಿದ್ದಂತೆ ಅವರು ಆ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ. ಆದಾಗ್ಯೂ, ಈ ಕುರಿತು ಎಕ್ಸ್ (ಟ್ವಿಟರ್)ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸಿಜೆಪಿ (CJP),”ಇದು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿದೆ. ಆರ್‌ಎಎಫ್ ಅಧಿಕಾರಿಯೊಬ್ಬರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಜಿರಳೆಗಳಂತೆ ಕಾಣುತ್ತಿದ್ದಾರೆ ಮತ್ತು ಪೊಲೀಸರ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ನೆನಪಿರಲಿ, ನಾವು ಜಿರಳೆಗಳು… ಜಿರಳೆಗಳು ಎಂದಿಗೂ ಸಾಯುವುದಿಲ್ಲ!” ಎಂದು ಕಟುವಾಗಿ ತಿರುಗೇಟು ನೀಡಿದೆ.

ಇದನ್ನೂ ಓದಿ: ನೀಟ್ ಅಕ್ರಮ ಮಾಫಿಯಾ ವಿರುದ್ಧ ಪ್ರಧಾನಿ ಮೋದಿ ಕಡಕ್ ವಾರ್ನಿಂಗ್: ‘ಎಕ್ಸ್’‌ನಲ್ಲಿ ಪ್ರತ್ಯುತ್ತರ ನೀಡಿ 3 ಪ್ರಮುಖ ಬೇಡಿಕೆ ಮುಂದಿಟ್ಟ ರಾಹುಲ್ ಗಾಂಧಿ

ಸರ್ಕಾರಿ ನೌಕರರ ಸೇವಾ ನಿಯಮಗಳ ಪ್ರಕಾರ ಅಧಿಕಾರಿಗಳು ಯಾವುದೇ ಜನಾಂಗೀಯ ನಿಂದನೆ, ವೈಯಕ್ತಿಕ ನಿಂದನೆ ಅಥವಾ ಸರ್ಕಾರಿ ಅಧಿಕಾರಿಗೆ ಶೋಭೆಯಲ್ಲದ ನಡವಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುವಂತಿಲ್ಲ. ಅಲ್ಲದೆ, ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಂತಹ ವೈಯಕ್ತಿಕ ಖಾತೆಗಳಲ್ಲಿ ಸಮವಸ್ತ್ರ ಧರಿಸಿರುವ ಫೋಟೋಗಳನ್ನು ಪ್ರೊಫೈಲ್ ಪಿಕ್ಚರ್ ಆಗಿ ಬಳಸಬಾರದು ಎಂಬ ನಿಯಮವೂ ಇದೆ.

ಆದರೆ ಸೋನಿಯಾ ಅವರು ‘3star_Sonia’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಮವಸ್ತ್ರದ ಫೋಟೋವನ್ನೇ ಪ್ರೊಫೈಲ್ ಪಿಕ್ಚರ್ ಆಗಿ ಬಳಸಿದ್ದಾರೆ. ಕರ್ತವ್ಯದಲ್ಲಿದ್ದಾಗ ಇಂತಹ ರಾಜಕೀಯ ಹೇಳಿಕೆ ನೀಡಿರುವುದು ಶಿಸ್ತುಕ್ರಮಕ್ಕೆ ಅರ್ಹವಾದ ಅಪರಾಧವಾಗಿದ್ದು, ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *