ಕಲ್ಲಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಾಬ್ದಿ ವರ್ಷಾಚರಣೆಯ ಶುಭ ಸಂದರ್ಭದ ಪ್ರಯುಕ್ತ, ಇಲ್ಲಿನ ಶ್ರೀ ರಾಮ ಪದವಿಪೂರ್ವ ವಿದ್ಯಾಲಯದಲ್ಲಿ “ಸನಾತನಾ ಈ ಚೇತನಾ” ಶೀರ್ಷಿಕೆಯ ವಿಶೇಷ ಗೀತೆಯ ಧ್ವನಿ (Audio) ಮತ್ತು ದೃಶ್ಯಾವಳಿ (Video) ಬಿಡುಗಡೆ ಸಮಾರಂಭ ಜುಲೈ 16ರಂದು ಅದ್ಧೂರಿಯಾಗಿ ನೆರವೇರಿತು.
ಕೆ. ಮಹೇಂದ್ರ ನಾಥ್ ಸಾಲೆತ್ತೂರು ಅವರ ಆಕರ್ಷಕ ಸಾಹಿತ್ಯ ಹಾಗೂ ಶ್ರೀ ಚಂದ್ರಶೇಖರ ಆಚಾರ್ಯ ಕಲ್ಲಡ್ಕ ಅವರ ಮಧುರ ಗಾಯನದಲ್ಲಿ ಮೂಡಿಬಂದಿರುವ ಈ ಗೀತೆಯ ದೃಶ್ಯಾವಳಿಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ವಹಿಸಿದ್ದರು.
ಇದೇ ಸಂದರ್ಭದಲ್ಲಿ ‘ಸನಾತನಾ ಈ ಚೇತನಾ’ ಗೀತೆಗೆ ಸಾಹಿತ್ಯ ರಚಿಸಿದ ಕೆ. ಮಹೇಂದ್ರ ನಾಥ್ ಸಾಲೆತ್ತೂರು ಹಾಗೂ ಈ ಕಿರುಚಿತ್ರ ರೂಪುಗೊಳ್ಳಲು ಸಹಕರಿಸಿದ ವಿವಿಧ ಕಲಾವಿದರನ್ನು ಮತ್ತು ತಾಂತ್ರಿಕ ಬಳಗವನ್ನು ಆಡಳಿತ ಮಂಡಳಿ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ಕಮಲಾ ಪ್ರಭಾಕರ ಭಟ್, ಗಾಯಕ ಚಂದ್ರಶೇಖರ ಆಚಾರ್ಯ, ಸಾಹಿತಿ ಮಹೇಂದ್ರನಾಥ್ ಸಾಲೆತ್ತೂರು, ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ವಿದ್ಯಾಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪ್ರಸಾದ್, ಮತ್ತು ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
ಇದನ್ನೂ ಓದಿ: NEET UG 2026: ಕಲ್ಲಡ್ಕ ಶ್ರೀರಾಮ ಪ.ಪೂ. ವಿದ್ಯಾಲಯದ ವಿದ್ಯಾರ್ಥಿನಿ ವಾಸವಿ ಕೆ.ಸಿ. ಅದ್ವಿತೀಯ ಸಾಧನೆ
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಪ್ರಸಾದ್ ಸ್ವಾಗತಿಸಿದರು. ಗೀತೆಯ ಗಾಯಕರಾದ ಚಂದ್ರಶೇಖರ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕರಾದ ಶ್ರೀ ಅಶೋಕ್ ಕುಮಾರ್ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

