ಸುಳ್ಯ: ಬಂಟ್ವಾಳದಲ್ಲಿ ಯುವತಿಯೊಬ್ಬಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆಯು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹದ್ದಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಮಾನವೀಯ ಮತ್ತು ರಕ್ಕಸ ಕೃತ್ಯವನ್ನು ತಾವು ತೀವ್ರ ಪದಗಳಲ್ಲಿ ಖಂಡಿಸುವುದಾಗಿ ಅವರು ಹೇಳಿದ್ದಾರೆ.
ನಾಗರಿಕ ಸಮಾಜದಲ್ಲಿ ಇಂತಹ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಪ್ರತಿಪಾದಿಸಿರುವ ಶಾಸಕರು, ಸಾರ್ವಜನಿಕ ಸ್ಥಳದಲ್ಲೇ ಇಂತಹ ಘೋರ ಕೊಲೆ ನಡೆದಿರುವುದು ಮಹಿಳೆಯರ ಮತ್ತು ಯುವತಿಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕವನ್ನು ಮೂಡಿಸಿದೆ. ಕಾನೂನಿನ ಭಯವಿಲ್ಲದೆ ಸಾರ್ವಜನಿಕವಾಗಿ ಇಂತಹ ಧೈರ್ಯ ತೋರುವ ಕ್ರೂರಿಗಳಿಗೆ ಸಮಾಜದಲ್ಲಿ ಕಠಿಣ ಸಂದೇಶ ರವಾನೆಯಾಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಇಂತಹ ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್ ಇಲಾಖೆಯು ಯಾವುದೇ ವಿಳಂಬ ಮಾಡದೆ ಈ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇಂತಹ ಘೋರ ಅಪರಾಧ ಎಸಗಿದ ರಕ್ಕಸ ಆರೋಪಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣಾತಿಕಠಿಣ ಶಿಕ್ಷೆಯಾಗುವಂತೆ ನ್ಯಾಯಾಲಯದಲ್ಲಿ ಗಟ್ಟಿಯಾದ ಕಾನೂನು ಹೋರಾಟವನ್ನು ರೂಪಿಸಬೇಕು.
ಇದನ್ನೂ ಓದಿ; ಬಂಟ್ವಾಳ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸತ್ಯ ಬಹಿರಂಗಪಡಿಸಿದ ಎಸ್ಪಿ ಅರುಣ್ ಕೆ
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಾಗೂ ಯುವತಿಯರ ರಕ್ಷಣೆ ಮತ್ತು ಸುರಕ್ಷತೆಗೆ ಕಾನೂನು ಸುವ್ಯವಸ್ಥೆ ಇಲಾಖೆಯು ಮತ್ತಷ್ಟು ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಮೃತ ಯುವತಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಆಕೆಯ ಕುಟುಂಬಕ್ಕೆ ಈ ಆಘಾತಕಾರಿ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಶಾಸಕರು ಪ್ರಾರ್ಥಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಸಿಗುವವರೆಗೂ ತಮ್ಮ ಬೆಂಬಲ ಸದಾ ಇರಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

