ಸುಳ್ಯ; ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಸಾರ್ವಜನಿಕರ ದೀರ್ಘಕಾಲದ ಭೂಸಮಸ್ಯೆ ಹಾಗೂ ಜಂಟಿ ಸರ್ವೆ ಬೇಡಿಕೆಯನ್ನು ಬಗೆಹರಿಸುವಂತೆ ಆಗ್ರಹಿಸಿ, ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ (Bhagirathi Murulya) ಅವರು ಸಚಿವ ಡಾ. ಜಿ. ಪರಮೇಶ್ವರ್ (Dr. G. Parameshwara) ಅವರನ್ನು ಭೇಟಿಯಾಗಿ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ. ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಸರ್ವೆ ನಂಬರ್ 186ರ ಜಂಟಿ ಸರ್ವೆಯು ಇದುವರೆಗೂ ಪೂರ್ಣಗೊಳ್ಳದ ಕಾರಣ ಸ್ಥಳೀಯ ನಿವಾಸಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
ಜಂಟಿ ಸರ್ವೆ ನಡೆಯದಿರುವುದರಿಂದ ಸರ್ವೆ ನಂಬರ್ 186ರ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರಿಗೆ ನಿವೇಶನ ಹಕ್ಕುಪತ್ರ ಸೇರಿದಂತೆ ಇನ್ನಿತರ ಸರ್ಕಾರಿ ಯೋಜನೆಗಳ ಪ್ರಯೋಜನ ಹಾಗೂ ಮೂಲಭೂತ ಸವಲತ್ತುಗಳನ್ನು ಪಡೆಯಲು ಅಸಾಧ್ಯವಾಗಿದೆ. ನೆಲ್ಯಾಡಿ ಗ್ರಾಮದ ಸರ್ವೆ ನಂಬರ್ 186ನ್ನು ತುರ್ತಾಗಿ ಜಂಟಿ ಸರ್ವೆ ನಡೆಸಿ, ಕಂದಾಯ (ಸರ್ಕಾರಿ) ಮತ್ತು ಅರಣ್ಯ ಇಲಾಖೆ ವ್ಯಾಪ್ತಿಯ ಜಾಗಗಳ ಸ್ಪಷ್ಟ ಗಡಿ ಗುರುತು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ನಿರ್ದೇಶನ ನೀಡುವಂತೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಇದನ್ನು ಓದಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಸುಳ್ಯದಲ್ಲಿ ‘ಸೇವಾಸೇತು’ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ
ಈ ಮೂಲಕ ಸದರಿ ಭಾಗದ ಸಾರ್ವಜನಿಕರ ಬಹುದಿನಗಳ ಜಂಟಿ ಸರ್ವೆ ಬೇಡಿಕೆಯನ್ನು ಶೀಘ್ರವೇ ಈಡೇರಿಸಿ, ಜನರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವಂತೆ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


