ಮುಂಬೈ: ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದಿರುವ ಯುದ್ಧದ ಉದ್ವಿಗ್ನತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಉಂಟಾಗಿರುವ ತೀವ್ರ ಏರಿಕೆಯ ಕಾರಣದಿಂದಾಗಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ‘ಇಂಡಿಗೋ’ದ ಪೋಷಕ ಕಂಪನಿಯಾದ ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಷೇರುಗಳು ಶೇಕಡಾ 3 ರಷ್ಟು ಕುಸಿತ ಕಂಡಿವೆ. ಇದರೊಂದಿಗೆ ಏರ್‌ಬಸ್ ಸಂಸ್ಥೆಯಿಂದ ಹೊಸ ವಿಮಾನಗಳ ವಿತರಣೆ ವಿಳಂಬವಾಗುತ್ತಿರುವ ಸುದ್ದಿಯೂ ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ (NSE) ಕಂಪನಿಯ ಷೇರುಗಳು 127.50 ರೂಪಾಯಿ (ಶೇ. 2.85) ಕುಸಿತ ಕಂಡು, ಪ್ರತಿ ಷೇರಿನ ಬೆಲೆ 4,351 ರೂಪಾಯಿ ತಲುಪಿದೆ. ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ (Brent Crude) ಬೆಲೆಯು ಶೇಕಡಾ 4.4 ರಷ್ಟು ಜಿಗಿದು ಪ್ರತಿ ಬ್ಯಾರೆಲ್‌ಗೆ 97.15 ಡಾಲರ್ ತಲುಪಿದೆ. ಹಾಗೆಯೇ ಡಬ್ಲ್ಯುಟಿಐ (WTI) ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 94 ಡಾಲರ್ ಗಡಿ ದಾಟಿದೆ. ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣೆಯ ವೆಚ್ಚದಲ್ಲಿ ಏವಿಯೇಷನ್ ಟರ್ಬೈನ್ ಇಂಧನ (ATF – ವಿಮಾನದ ಇಂಧನ) ವೆಚ್ಚವೇ ಅತಿ ದೊಡ್ಡ ಪಾಲನ್ನು ಹೊಂದಿರುವುದರಿಂದ, ಇಂಧನ ಬೆಲೆ ಏರಿಕೆಯು ಇಂಡಿಗೋ ಲಾಭದ ಮೇಲೆ ನೇರ ಪರಿಣಾಮ ಬೀರಲಿದೆ.
ಇದನ್ನೂ ಓದಿ: ಗೃಹಬಳಕೆ ಎಲ್‌ಪಿಜಿ ದರದಲ್ಲಿ ಏರಿಕೆ!, ಆದರೂ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲೇ ಕಡಿಮೆ ಬೆಲೆ
ಷೇರು ಕುಸಿತಕ್ಕೆ ಇಂಧನ ಬೆಲೆ ಮಾತ್ರವಲ್ಲದೆ ಜೂನ್ 5 ರಂದು ಬ್ಲೂಮ್‌ಬರ್ಗ್ ಪ್ರಕಟಿಸಿದ ವರದಿಯೂ ಕಾರಣವಾಗಿದೆ. ಅದರಂತೆ, ಜಾಗತಿಕ ವಿಮಾನ ತಯಾರಿಕಾ ಸಂಸ್ಥೆಯಾದ ಏರ್‌ಬಸ್ (Airbus SE) ಕಂಪನಿಯು ಇಂಡಿಗೋ ಸಂಸ್ಥೆಗೆ ನೀಡಬೇಕಾಗಿದ್ದ ‘A321XLR’ ಮಾದರಿಯ ಹೊಸ ಜೆಟ್ ವಿಮಾನಗಳ ವಿತರಣೆಯಲ್ಲಿ ವಿಳಂಬ ಎದುರಿಸುತ್ತಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಪೂರೈಕೆ ಸರಪಳಿಯಲ್ಲಿ (Supply-chain) ಉಂಟಾಗಿರುವ ವ್ಯತ್ಯಯದಿಂದಾಗಿ, 2026 ರ ಅಂತ್ಯದ ವೇಳೆಗೆ ಇಂಡಿಗೋ ಪಡೆಯಬೇಕಾಗಿದ್ದ 9 ಎಕ್ಸ್‌ಎಲ್‌ಆರ್ (XLR) ಜೆಟ್‌ಗಳ ವಿತರಣೆಯು ಹಲವು ತಿಂಗಳುಗಳ ಕಾಲ ಮುಂದೂಡಲ್ಪಟ್ಟಿದೆ. ಇಂಡಿಗೋ ಇದುವರೆಗೆ ಕೇವಲ ಎರಡು A321XLR ವಿಮಾನಗಳನ್ನು ಪಡೆದುಕೊಂಡಿದ್ದು, ಅವುಗಳನ್ನು ಅಥೆನ್ಸ್ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯಾಚರಣೆಗೆ ಬಳಸುತ್ತಿದೆ. ಹೊಸ ವಿಮಾನಗಳ ಸೇರ್ಪಡೆ ವಿಳಂಬವು ಕಂಪನಿಯ ಜಾಗತಿಕ ವಿಸ್ತರಣಾ ಯೋಜನೆಗೆ ಹಿನ್ನಡೆ ತಂದಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


