ನವದೆಹಲಿ: ಹಿಂದೂ ಉತ್ತರಾಧಿಕಾರ ಕಾಯ್ದೆ-1956ಕ್ಕೆ (Hindu Succession Act, 1956) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ತಾತನ ಆಸ್ತಿಯು ವಿಭಾಗವಾದಾಗ ತಂದೆಯ ಪಾಲಿಗೆ ಬಂದ ಆಸ್ತಿಯು ಆತನ ವೈಯಕ್ತಿಕ/ಸ್ವಯಾರ್ಜಿತ ಆಸ್ತಿಯಾಗಲಿದೆಯೇ ಹೊರತು ಜಂಟಿ ಕುಟುಂಬದ ಆಸ್ತಿಯಾಗುವುದಿಲ್ಲ. ಹಾಗಾಗಿ, ತಂದೆ ಬದುಕಿರುವಾಗ ತಾತನ ಆಸ್ತಿಯಲ್ಲಿ ಪಾಲು ಕೇಳಲು ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿರುವುದಿಲ್ಲ (Right by Birth) ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಹಾಗೂ ನ್ಯಾಯಮೂರ್ತಿ ಸುನಿತಾ ಅಗರ್ವಾಲ್ ಅವರಿದ್ದ ದ್ವಿಪೀಠವು ಈ ಪ್ರಮುಖ ತೀರ್ಪು ನೀಡುವ ಮೂಲಕ ತಂದೆ ಮಾರಾಟ ಮಾಡಿದ್ದ ಆಸ್ತಿಯಲ್ಲಿ ಪಾಲು ಕೋರಿ ಮೊಮ್ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ ಮತ್ತು ಹೈಕೋರ್ಟ್ ತೀರ್ಪು:
ತಾತನ ನಿಧನದ ನಂತರ 1994ರಲ್ಲಿ ನಡೆದ ರಾಜಿ (Compromise Decree) ಆಧಾರದ ಮೇಲೆ ತಂದೆಗೆ (Defendant 1) ಆಸ್ತಿ ಪಾಲು ಸಿಕ್ಕಿತ್ತು. 1994ರಲ್ಲೇ ಜನಿಸಿದ ಮಗ (ಮೇಲ್ಮನವಿ ದಾರ), 1997ರಲ್ಲಿ ತಂದೆಯು ಆ ಆಸ್ತಿಯನ್ನು ಬೇರೆಯವರಿಗೆ (D2 & D3) ಮಾರಾಟ ಮಾಡಿದ ನಂತರ 1997ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದನು. ತಾತನ ಆಸ್ತಿ ಜಂಟಿ ಕುಟುಂಬದ ಆಸ್ತಿಯಾಗಿರುವುದರಿಂದ ತಂದೆ ಮಾರಾಟ ಮಾಡಿದ ಜಮೀನಿನಲ್ಲಿ ತನಗೂ ಅರ್ಧ ಪಾಲು ಸಿಗಬೇಕೆಂದು ಅಪ್ರಾಪ್ತ ಮಗ ತಾಯಿಯ ಮೂಲಕ ಚೆನ್ನೈ ಸಿಟಿ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಿದ್ದನು. ಸಿವಿಲ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ, “ತಾತನ ಆಸ್ತಿ ವಿಭಾಗವಾದ ನಂತರ ತಂದೆಯ ಕೈಸೇರಿದ ಆಸ್ತಿಯಲ್ಲಿ ಮಗನಿಗೆ ಹುಟ್ಟಿನಿಂದ ಯಾವುದೇ ಹಕ್ಕು ಸಿಗುವುದಿಲ್ಲ. ಹಾಗಾಗಿ ಆತ ಪಾಲು ಕೇಳಲು ಅರ್ಹನಲ್ಲ” ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು.

ಸುಪ್ರೀಂ ಕೋರ್ಟ್ನ ಮುಖ್ಯ ವಾದಗಳು
ನ್ಯಾಯಾಲಯವು ಈ ಪ್ರಕರಣದಲ್ಲಿ ಮುಖ್ಯವಾಗಿ ಹಿಂದೂ ಉತ್ತರಾಧಿಕಾರ ಕಾಯ್ದೆ 1956ರ ಸೆಕ್ಷನ್ 8 (Section 8) ಅನ್ನು ಎತ್ತಿಹಿಡಿದಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ತಾತನ ಆಸ್ತಿಯು ಅವರ ವರ್ಗ-1 ರ (Class I) ವಾರಸುದಾರರಿಗೆ ಹಂಚಿಕೆಯಾದಾಗ ಮತ್ತು ವಿಭಾಗವಾದಾಗ, ತಂದೆಗೆ ಸಿಕ್ಕ ಪಾಲು ಆತನ ವೈಯಕ್ತಿಕ ಸ್ವತ್ತಾಗುತ್ತದೆ.
ಸೆಕ್ಷನ್ 8ರ ಅಡಿಯಲ್ಲಿ ಆಸ್ತಿ ಪಡೆದ ತಂದೆ ಅದನ್ನು ತನ್ನ ಸ್ವಂತ ಕುಟುಂಬದ ‘ಕರ್ತ’ (Karta) ಆಗಿ ಪಡೆಯುವುದಿಲ್ಲ. ಬದಲಾಗಿ ಅದನ್ನು ಆತ ತನ್ನ ವೈಯಕ್ತಿಕ ಸಾಮರ್ಥ್ಯದಲ್ಲೇ ಪಡೆಯುತ್ತಾನೆ. ತಂದೆಗೆ ಸಿಕ್ಕ ಆಸ್ತಿ ಸ್ವಯಾರ್ಜಿತವಾಗುವುದರಿಂದ, ತಂದೆ ಜೀವಂತವಾಗಿದ್ದಾಗ ಆತನ ಆಸ್ತಿಯನ್ನು ಕೇಳಲು ಅಥವಾ ಮಾರಾಟ ಮಾಡುವುದನ್ನು ತಡೆಯಲು ಮಗನಿಗೆ (ಮೊಮ್ಮಗನಿಗೆ) ಹಕ್ಕಿರುವುದಿಲ್ಲ.

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಲಾಗಿದ್ದ ‘ಸಿಡಬ್ಲ್ಯೂಟಿ ವಿ. ಚಂದರ್ ಸೇನ್’ (CWT v Chander Sen) ಹಾಗೂ ‘ರಾಧಾ ಬಾಯಿ ವಿ. ರಾಮ್ ನಾರಾಯಣ್’ (Radha Bai v Ram Narayan) ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿ, ಹಿಂದೂ ಉತ್ತರಾಧಿಕಾರ ಕಾಯ್ದೆ ಸೆಕ್ಷನ್ 8ರ ಸ್ಪಷ್ಟ ಪದಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಮೇಲ್ಮನವಿಯನ್ನು ವಜಾಗೊಳಿಸಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

