ಹೈದರಾಬಾದ್: ಪ್ರಿಯಕರನೊಂದಿಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು, ಆಸ್ಪತ್ರೆಯಲ್ಲೇ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಹೆಂಡತಿಯೇ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆಯೊಂದು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ನರ್ಸ್ ಆಗಿರುವ ಪತ್ನಿಯೇ ಈ ಕ್ರೂರ ಕೃತ್ಯ ಎಸಗಿದಾಕೆಯಾಗಿದ್ದಾಳೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನ್ಯಾಲ್ಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಶಾಂತ್ (35) ಕೊಲೆಯಾದ ದುರ್ದೈವಿ ಪತಿಯಾಗಿದ್ದಾನೆ.
ಹತ್ಯೆಯಾದ ಪ್ರಶಾಂತ್ ಇತ್ತೀಚೆಗಷ್ಟೇ ಗಲ್ಫ್ ದೇಶದಿಂದ ತನ್ನ ಸ್ವಗ್ರಾಮಕ್ಕೆ ಮರಳಿದ್ದ. ಆದರೆ ಆತ ಊರಿಗೆ ಬರುವಷ್ಟರಲ್ಲಿ ಪತ್ನಿ ಸಂಧ್ಯಾ ಹಾಗೂ ಆಕೆಯ ಪ್ರಿಯಕರ ಅನಿಲ್ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಗಂಡ ಊರಿಗೆ ಮರಳಿದ ನಂತರ ಇವರಿಬ್ಬರ ಪ್ರೇಮಾಟಕ್ಕೆ ಅಡ್ಡಿಯಾಗತೊಡಗಿದ್ದ. ಇದೇ ಕಾರಣಕ್ಕೆ ಪತಿಯನ್ನು ದಾರಿಯಿಂದ ಮುಳ್ಳು ತಪ್ಪಿಸಲು ಸಂಧ್ಯಾ ಹಾಗೂ ಆಕೆಯ ಪ್ರಿಯಕರ ಸ್ಕೆಚ್ ಹಾಕಿದ್ದರು.

ಮೊದಲ ಬಾರಿ ಟೆರೆಸ್‌ನಿಂದ ತಳ್ಳಿದ್ರೂ ಬದುಕುಳಿದಿದ್ದ ಪತಿ!
ಪತಿಯನ್ನು ಮುಗಿಸಲು ಮೊದಲಿಗೆ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಮನೆಯ ಟೆರೆಸ್ (ಮಹಡಿ) ಮೇಲಿಂದ ಕೆಳಗೆ ತಳ್ಳಿದ್ದರು. ಆದರೆ ಅದೃಷ್ಟವಶಾತ್ ಪ್ರಶಾಂತ್ ಭೀಕರ ಪೆಟ್ಟುಗಳೊಂದಿಗೆ ಬದುಕುಳಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:Viral: ಅಂಗಡಿಗೆ ನುಗ್ಗಿ ಚಿನ್ನ ಕದ್ದು ಹಾರಿಹೋದ ಕಾಗೆ! ಮುಂದೆನಾಯ್ತು?- Video
ಆಸ್ಪತ್ರೆಯ ಕ್ಯಾನುಲಾ ಮೂಲಕ ದೇಹಕ್ಕೆ ಸೇರಿದ ವಿಷ!
ಆದರೆ ಕ್ರೂರಿ ಪತ್ನಿ ಆಸ್ಪತ್ರೆಯಲ್ಲೂ ಗಂಡನನ್ನು ಬಿಡಲಿಲ್ಲ. ತಾನು ವೃತ್ತಿಯಲ್ಲಿ ನರ್ಸ್ ಆಗಿದ್ದರಿಂದ ಆಸ್ಪತ್ರೆಯಲ್ಲೇ ಗಂಡನಿಗೆ ಕಾವಲು ನಿಂತಿದ್ದಾಳೆ. ಪ್ರಶಾಂತ್ ಕೈಗೆ ಅಳವಡಿಸಲಾಗಿದ್ದ ಕ್ಯಾನುಲಾ (Canula) ಮೂಲಕ ಟಾಯ್ಲೆಟ್ ಕ್ಲೀನರ್ (ಆ್ಯಸಿಡ್ ಮಾದರಿಯ ದ್ರವ) ಹಾಗೂ ಇನ್ನು ಕೆಲವು ಅಪಾಯಕಾರಿ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿದ್ದಾಳೆ. ವಿಷಕಾರಿ ದ್ರವ ದೇಹದ ತುಂಬಾ ಹರಡಿ ಪ್ರಶಾಂತ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಪ್ರಶಾಂತ್ ಸಾವಿನ ಬಗ್ಗೆ ತೀವ್ರ ಅನುಮಾನಗೊಂಡು ಪೊಲೀಸರು ತನಿಖೆ ನಡೆಸಿದಾಗ ನರ್ಸ್ ಸಂಧ್ಯಾಳ ಈ ಭೀಕರ ಮೃಗೀಯ ವರ್ತನೆ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿ ಪತ್ನಿ ಸಂಧ್ಯಾ ಹಾಗೂ ಆಕೆಯ ಪ್ರಿಯಕರ ಅನಿಲ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

