ಕರೆ ಮಾಡಿದ್ರೆ ರೆಸ್ಪಾನ್ಸ್ ಸಿಗುತ್ತಿಲ್ಲ; ಮೆಸ್ಕಾಂ ಸಹಾಯವಾಣಿ ವಿರುದ್ಧ ಸಾರ್ವಜನಿಕರ ದೂರು; ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಮನವಿ ಸಲ್ಲಿಕೆ

ಪುತ್ತೂರು: ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ‘ಪುತ್ತಿಲ ಪರಿವಾರ ಸೇವಾ ಟ್ರಸ್ಟ್’ ನೇತೃತ್ವದಲ್ಲಿ ಮೆಸ್ಕಾಂ (MESCOM) ಇಲಾಖೆಯ ಶಾಖಾಧಿಕಾರಿ ಓ&ಎಮ್-1 ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅಧಿಕಾರಿಗಳನ್ನು ಭೇಟಿ ಮಾಡಿ, ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ ಅಧಿಕೃತ ಮನವಿ ಪತ್ರ ಸಲ್ಲಿಸಲಾಯಿತು.

ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಕೆಲವು ಕಡೆಗಳಲ್ಲಿ ತೀವ್ರವಾದ ಲೋ-ವೋಲ್ಟೇಜ್ (Low Voltage) ಸಮಸ್ಯೆ ಎದುರಾಗಿದ್ದರೆ, ಇನ್ನೂ ಕೆಲವು ಗ್ರಾಮೀಣ ಭಾಗಗಳಲ್ಲಿ ಸರಿಯಾಗಿ ವಿದ್ಯುತ್ ಸಂಪರ್ಕವೇ ಇಲ್ಲದೆ ಜನ ಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ಕತ್ತಲಲ್ಲಿ ದಿನದೂಡುವಂತಾಗಿದೆ. ವಿದ್ಯುತ್ ಅಭಾವದಿಂದಾಗಿ ತಾಲೂಕಿನಲ್ಲಿ ಕುಡಿಯುವ ನೀರಿಗೂ ಭಾರಿ ಸಮಸ್ಯೆಯಾಗುತ್ತಿದ್ದು, ಜನರ ದಿನನಿತ್ಯದ ಬದುಕು ಸಂಪೂರ್ಣ ದುಸ್ತರಗೊಂಡಿದೆ.

Advertisement

ವಿದ್ಯುತ್ ಕೈಕೊಟ್ಟಾಗ ಸಾರ್ವಜನಿಕರು ಮೆಸ್ಕಾಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಇಲಾಖೆಯ ಕಡೆಯಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬಂದಿವೆ. ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಈ ಉದಾಸೀನ ವೈಖರಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಹಿಂದೂ ಯುವತಿಗೆ ಚಾಕು ತೋರಿಸಿ ಬೆದರಿಕೆ; ಆಟೋ ಬೆನ್ನಟ್ಟಿದ ಆರು ಮಂದಿ ಮುಸ್ಲಿಂ ಯುವಕರು ಪೊಲೀಸ್ ವಶಕ್ಕೆ

ಪುತ್ತಿಲ ಪರಿವಾರದ ಪ್ರಮುಖ ಬೇಡಿಕೆಗಳು:

ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಂಭವ ಇರುವುದರಿಂದ ಮೆಸ್ಕಾಂ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಸರ್ಕಾರಕ್ಕೆ ತಕ್ಷಣವೇ ಒತ್ತಡ ಹೇರಿ ಇಲಾಖೆಯಲ್ಲಿ ಖಾಲಿ ಇರುವ ಲೈನ್‌ಮ್ಯಾನ್ ಹಾಗೂ ಇತರ ತಾಂತ್ರಿಕ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು.

ಗ್ರಾಹಕರ ದೂರುಗಳಿಗೆ ನಿರಂತರವಾಗಿ ಸ್ಪಂದಿಸಲು ಎರಡಕ್ಕಿಂತ ಹೆಚ್ಚು ಸಹಾಯವಾಣಿ (Helpline) ಸಂಖ್ಯೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು.

ಪ್ರತಿಭಟನೆಯ ಎಚ್ಚರಿಕೆ

ಒಂದು ವೇಳೆ ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸದೇ ಇದ್ದಲ್ಲಿ, ಸ್ಥಳೀಯಾಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಲೈನ್‌ಮ್ಯಾನ್‌ಗಳ ಕೊರತೆಯ ವಿರುದ್ಧ ಪುತ್ತೂರಿನ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಪತ್ರದ ಮೂಲಕ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಮುಖರಾದ ಅನಿಲ್ ತೆಂಕಿಲ, ಪ್ರಶಾಂತ್ ನೆಕ್ಕಿಲಾಡಿ ಹಾಗೂ ಕೋಶಾಧಿಕಾರಿ ರೂಪೇಶ್ ನೈಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *