ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆಯಲ್ಲಿ ಬುಧವಾರ (ಜುಲೈ 8) ಅತ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಕೆಲಸಕ್ಕೆ ತೆರಳುತ್ತಿದ್ದ ಹಿಂದೂ ಯುವತಿಯೊಬ್ಬಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ, ಆಕೆ ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ಕಾರಿನಲ್ಲಿ ಬೆನ್ನಟ್ಟಿ ಕಿರುಕುಳ ನೀಡಿದ ಆರೋಪದ ಮೇಲೆ ಆರು ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವತಿಯು ಎಂದಿನಂತೆ ಮಂಗಳೂರಿಗೆ ಕೆಲಸಕ್ಕೆ ಹೋಗಲು ಪುರುಷರಕಟ್ಟೆಯಲ್ಲಿ ತನ್ನ ಸ್ಕೂಟಿಯನ್ನು ಪಾರ್ಕ್ ಮಾಡುತ್ತಿದ್ದ ಸಂದರ್ಭದಲ್ಲಿ ಮುಸ್ಲಿಂ ಯುವಕರ ತಂಡವೊಂದು ಆಕೆಗೆ ಚಾಕು ತೋರಿಸಿ ಭೀತಿ ಹುಟ್ಟಿಸಿದೆ. ಇದರಿಂದ ತೀವ್ರ ಗಾಬರಿಗೊಂಡ ಯುವತಿ ತಕ್ಷಣವೇ ಅಲ್ಲಿಂದ ಆಟೋರಿಕ್ಷಾ ಹತ್ತಿ ಪುತ್ತೂರಿನ ಕಡೆಗೆ ಧಾವಿಸಿದ್ದಾಳೆ.

ಆದರೆ, ಯುವತಿಯನ್ನು ಬಿಡದ ಆ ಯುವಕರ ತಂಡ, ಸುಮಾರು ಆರು ಜನ ಸೇರಿ ‘ಥಾರ್’ (Thar) ಕಾರಿನಲ್ಲಿ ಆಟೋವನ್ನು ಬೆನ್ನಟ್ಟಿಕೊಂಡು ಬಂದಿದ್ದಾರೆ. ಮಾರ್ಗಮಧ್ಯೆ ಆಟೋವನ್ನು ತಡೆದು ನಿಲ್ಲಿಸಿ ಮತ್ತೊಮ್ಮೆ ಯುವತಿಗೆ ಬೆದರಿಕೆ ಹಾಕಿದ್ದಾರೆ. ಯುವಕರು ಚಾಕು ಹಿಡಿದು ಬೆದರಿಕೆ ಹಾಕುತ್ತಿರುವ ಈ ಇಡೀ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ಘಟನೆಯಿಂದ ತೀವ್ರ ಆತಂಕಕ್ಕೊಳಗಾದ ಯುವತಿ ತಕ್ಷಣವೇ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಹಿಂದೂ ಸಂಘಟನೆಯ ಮುಖಂಡರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ.
ಇದನ್ನೂ ಓದಿ: ಟೆರೆಸ್‌ನಿಂದ ತಳ್ಳಿದರೂ ಬದುಕುಳಿದಿದ್ದ ಪತಿಗೆ ಟಾಯ್ಲೆಟ್ ಕ್ಲಿನರ್ ಇಂಜೆಕ್ಟ್ ಮಾಡಿ ಕೊಂದೇ ಬಿಟ್ಟಳು ಪತ್ನಿ
ಯುವತಿಯ ದೂರಿನನ್ವಯ ತಕ್ಷಣವೇ ಕಾರ್ಯಾಚರಣೆಗೆ ಇಳಿದ ಪುತ್ತೂರು ಪೊಲೀಸರು, ಬೆದರಿಕೆ ಹಾಕಿದ ಆರು ಮಂದಿ ಮುಸ್ಲಿಂ ಯುವಕರನ್ನು ಪತ್ತೆ ಹಚ್ಚಿ ಸದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

