ಉಡುಪಿ: ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗದಲ್ಲಿ ಶುಕ್ರವಾರ (ಏಪ್ರಿಲ್ 24) ಮಧ್ಯಾಹ್ನ ಭೀಕರ ಅವಘಡವೊಂದು ಸಂಭವಿಸಿದೆ. ಮರದಿಂದ ಮಾವಿನ ಕಾಯಿ ಕೀಳಲು ಹೋದ ವ್ಯಕ್ತಿಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಅಲೆವೂರು ನಿವಾಸಿ ಸದಾನಂದ ದೇವಾಡಿಗ (55) ಎಂದು ಗುರುತಿಸಲಾಗಿದೆ. ಇವರು ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮಧ್ಯಾಹ್ನ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಮರದಿಂದ ಮಾವಿನ ಕಾಯಿ ಕೀಳಲು ಪ್ರಯತ್ನಿಸುತ್ತಿದ್ದಾಗ, ಹತ್ತಿರದಲ್ಲೇ ಹಾದುಹೋಗಿದ್ದ ಹೈ-ವೋಲ್ಟೇಜ್ ವಿದ್ಯುತ್ ತಂತಿ ಅಚಾನಕ್ಕಾಗಿ ಅವರ ದೇಹಕ್ಕೆ ಸ್ಪರ್ಶಿಸಿದೆ.

ವಿದ್ಯುತ್ ಪ್ರವಹಿಸಿದ ತೀವ್ರತೆಗೆ ಸದಾನಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವು ಮರದ ಮೇಲೆಯೇ ಸಿಲುಕಿಕೊಂಡಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಮೃತದೇಹವನ್ನು ಕೆಳಗಿಳಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು: ಲವ್ ಮಾಡಿ ಮಗು ಕರುಣಿಸಿದ ಪ್ರಕರಣ: ಸಂತ್ರಸ್ತೆಯನ್ನು ವಿವಾಹವಾಗಲು ಕೃಷ್ಣನಿಗೆ ಹೈಕೋರ್ಟ್ ಸೂಚನೆ

ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕರ್ತವ್ಯನಿಷ್ಠ ಗ್ರಾಮ ಸಹಾಯಕನ ಅಕಾಲಿಕ ನಿಧನಕ್ಕೆ ಸಹೋದ್ಯೋಗಿಗಳು ಹಾಗೂ ಅಲೆವೂರು ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

